Thursday, October 30, 2014


ಏಕ ಶ್ಲೋಕೀ ಪುರಾಣಗಳು

ಏಕ ಶ್ಲೋಕೀ ರಾಮಾಯಣ:

ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||
ವಾಲಿನಿರ್ದನಂ ಸಮುದ್ರ ತರಣಂ ಲಂಕಾಪುರೀ ದಾಹನಂ|
ಪಶ್ಚಾದ್ರಾವಣಕುಂಭಕರ್ಣ ಹನನಂ ಏತದಧಿ (ಏತದ್ಧಿ) ರಾಮಾಯಣಂ||---(ದಧಿ ಎಂದರೆ ಮಜ್ಜಿಗೆ-ಮೊಸರು)
  • ಹಿಂದೆ ಶ್ರೀ ರಾಮನು (ತಂದೆಯ ವಚನವನ್ನು ಉಳಿಸಲು ಸೀತೆಯೊಡನೆ, ಹದಿನಾಲ್ಕು ವರ್ಷಕಾಲ) ತಪೋವನಕ್ಕೆ ಹೋದನು. (ಅಲ್ಲಿ ಸೀತೆಯ ಕೋರಿಕೆಯನ್ನು ಈಡೇರಿಸಲು ಜಿಂಕೆಯನ್ನು ಹಿಡಿಯಲು ಹೋಗಿ ಸಿಗದೆ ) ಆ ಕಾಂಚನ (ಚಿನ್ನದ) ಜಿಂಕೆಯನ್ನು ಕೊಂದನು.
  • ಆ ಸಮಯದಲ್ಲಿ (ರಾವಣನಿಂದ ಪರ್ಣಕುಟೀರದಲ್ಲಿದ್ದ ) ಸೀತೆಯ ಅಪಹರಣವಾಯಿತು. (ಅವಳನ್ನು ರಕ್ಷಿಸಲು ಹೋದ) ಜಟಾಯುವಿನ ಮರಣವಾಯಿತು. (ಸೀತೆಯನ್ನು ಹುಡುಕುತ್ತಾ ಲಕ್ಮಣನೊಡನೆ ಹೋದ ರಾಮನಿಗೆ) ಸುಗ್ರೀವನೊಡನೆ ಸಂಧಿ ಮಾತಾಡಿ ಸ್ನೇಹವಾಯಿತು.
  • (ನಂತರ ರಾಮನು ಸುಗ್ರೀವನ ಅಣ್ಣ ಮತ್ತು ಶತ್ರು) ವಾಲಿಯನ್ನು ವಧಿಸಿದನು. (ಸೀತಾನ್ವೇಶಣೆಗೆ ಹೋದ ಹನುಮಂತನು)ಸಮುದ್ರವನ್ನು ಲಂಘಿಸಿ (ಹಾರಿ, ಲಂಕೆಯಲ್ಲಿ ಸೀತಯನ್ನು ಕಂಡು ಹಿಂತಿರುಗಿ ಬರುವಾಗ ) ಲಂಕೆಯನ್ನು ದಹಿಸಿದನು(ಸುಟ್ಟನು.
  • (ಆಮೇಲೆ ಲಕ್ಷ್ಮಣನ ಜೊತೆಗೂಡಿ, ರಾಮನು ಸುಗ್ರೀವ ಮತ್ತು ಅವನ ಸೈನ್ಯದೊಡನೆ ಲಂಕೆಗೆ ಹೋಗಿ) ರಾವಣ ಕುಂಭಕರ್ಣರನ್ನು ಕೊಂದನು. (ಸೀತೆಯನ್ನು ಮರಳಿ ಪಡೆದು ಹದಿನಾಲ್ಕು ವರ್ಷ ಕಳೆದಾಗ ಅಯೋದ್ಯೆಗೆ ಮರಳಿ ಬಂದು ಪಟ್ಟಾಭಿಷಕ್ತನಾದನು)
ಇದಕ್ಕೆ ಮಜ್ಜಿಗೆ ರಾಮಾಯಣವೆಂದೂ ಹೆಸರಿದೆ.
  • ಕಾರಣ – ಒಮ್ಮೆ ಒಬ್ಬ ಪಂಡಿತನು ಬಿಸಿಲಲ್ಲಿ ಬಸವಳಿದು ಬಾಯಾರಿ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಶ್ರೋತ್ರೀಯನ ಮನೆಯ ಮುಂದೆ ಆ ಮನೆಯ ಒಬ್ಬ ಬಾಲಕಿ ನಿಂತಿರುವುದನ್ನು ಕಂಡನು. ಆಗ ಅವನು ಆ ಬಾಲಕಿಯನ್ನು ಕುರಿತು ತನಗೆ ಬಹಳ ಬಾಯಾರಿಕೆ ಯಾಗಿರುವುದಾಗಿಯೂ , ಕುಡಿಯಲು ನೀರು ಕೊಡಬೇಕೆಂದೂ ಕೇಳಿದನು. ಅದಕ್ಕೆ ಬಾಲಕಿಯು, ‘ನೀರೇಕೆ ನಿಮಗೆ ಒಳ್ಳೆಯ ಮಜ್ಜಿಗೆಯನ್ನೇ ಕೊಡುತ್ತೇನೆ ; ಆದರೆ ಒಂದು ನಿಯಮ (óಷರತ್ತು), ನೀವು ನನಗೆ ಮಜ್ಜಿಗೆ ಕುಡಿದ ನಂತರ ರಾಮಾಯಣದ ಕಥೆಯನ್ನು ಹೇಳಬೇಕು’, ಎಂದಳಂತೆ ಅದಕ್ಕೆ ಪಂಡಿತನು ಒಪ್ಪಿದನು. ಆ ಬಾಲಕಿ ಆ ಪಂಡಿತನಿಗೆ ಬಾಯಾರಿಕೆ ನೀಗುವಷ್ಟು ಹೊಟ್ಟೆ ತುಂಬಾ ಮಜ್ಜಿಗೆ ಕೊಟ್ಟಳು. ಅವನನ್ನು ಕುರಿತು, ‘ರಾಮಾಯಣದ ಕಥೆ ಹೇಳಿ’, ಎಂದಳು . ಆಗ ಆ ಪಂಡಿತನು ಈ ಮೇಲಿನ ಶ್ಲೋಕವನ್ನು ಹೇಳಿ - ‘ಇದೇ ರಾಮಾಯಣದ ಕಥೆ’, ಎಂದನಂತೆ . ಅದಕ್ಕೆ ಈ ಏಕ ಶ್ಲೋಕದ ರಾಮಾಯಣಕ್ಕೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿದೆ ಎನ್ನುತ್ತಾರೆ. (ಹಳೆಯ ಚಂದಮಾಮ ಕಥೆ).

ಮಹಾಭಾರತ ::ಭಾಗವತ

ಏಕ ಶ್ಲೋಕೀ ಮಹಾಭಾರತ:

ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಕ್ಷಾಗ್ರಹೇ ದಾಹನಂ|
ದ್ಯೂತೇ ಶ್ರೀ ಹರಣಂ ವನವಿಹರಣಂ ಮತ್ಸ್ಯಾಲಯೇ ವರ್ಧನಂ ||
ಲೀಲಾ ಗೋಗ್ರಹಣಂ ರಣೇವಿತರಣಂ ಸಂಧಿಕ್ರಿಯಾ ಜ್ರಂಭಣಂ|
ಭೀಷ್ಮ ದ್ರೋಣ ಸುಯೋಧನಾದಿ ಮಥನಂ ಏತನ್ಮಹಾಭಾರತಂ ||
ಏಕ ಶ್ಲೋಕೀ ಭಾಗವತ:
ಆದೌ ದೇವಕೀ ದೇವೀ ಗರ್ಭ ಜನನಂ ಗೋಫೀ ಗೃಹೇ ವರ್ಧನಂ |
ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ||
ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಾಃ ಪಾಲನಂ|
ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್||
  • (ಇದರಲ್ಲಿ ಶ್ರೀ ಕೃಷ್ಣನ ಕಥೆಯನ್ನು ಮಾತ್ರಾ ಹೇಳಿದೆ)

ಭಾಗವತದ ಬಗೆಗೆ ವಿವಾದ

ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ ಜಯದೇವನ ಸೋದರನಾದ

ಬೋಪದೇವನು . ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.
ಶ್ರೀಮದ್ಭಾಗವತ ನಾಮಂ ಪುರಾಣಂ ಚ ಮಯೇರಿತಂ|(ಮಯೇರಚಿತಂ)
ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
  • ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ’,ಗ್ರಂಥದಲ್ಲಿ ಬರೆದಿದ್ದಾರೆ.(ಪುಟ277) ಕನ್ನಡಾನುವಾದ ಪರಿಷ್ಕøತ ಮುದ್ರಣ 2003; ಅನುವಾದಕರು : ಪಂಡಿತ ಸುಧಾಕರ
ಚತುರ್ವೇದಿ ; ಪ್ರಕಾಶಕರು : ಆರ್ಯಸಮಾಜ ಶ್ರದ್ಧಾನಂದ ಭವನ, ವಿಶ್ವೇಶ್ವರಪುರಂ , ಬೆಂಗಳೂರು, 560004 (ಫೋ.6526380)
  • ಭಾಗವತ ಪುರಾಣವು ವೋಪದೇವ (ಬೋಪದೇವ ಇದರ ಬಂಗಾಳಿ ರೂಪ) ನು ಮಾಡಿದುದು ಎಂಬ ನಾಣ್ಣುಡಿಯುಂಟು ಇವನು ದೇವಗಿರಿಯ ರಾಜನಾದ ಹೇಮಾದ್ರಿಯ ಸಭಾಸದನು ವೋಪದೇವನು 13ನೆಯ ಶತಮಾನದವನು. ಆದರೆ ಅನೇಕರು ಇದನ್ನು ಒಪ್ಪುವುದಿಲ್ಲ; ಭಾಗವತ ದ್ವೇóಷಿಗಳಾದ ಶಾಕ್ತರು ಈ ವದಂತಿಯನ್ನು ಹರಡಿರುವರೆಂದು ವೈಷ್ಣವರು ಹೇಳುವರು. ---ಟೀಕಕಾರರಾದ ಶ್ರೀಧರಸ್ವಾಮಿ ಮೊದಲನೆಯ ಶ್ಲೋಕದ ಟೀಕಿನಲ್ಲಿಯೆ ‘ಭಾಗವತಂ ನಾಮಾನ್ಯದಿತ್ಯಪಿ ನಾ ಶಂಕನೀಯಮ್’, ಎಂದು ಬರೆದಿದ್ದಾರೆ-ಇದರಿಂದ ಭಾಗವತವು ಪುರಾಣವಲ್ಲವೆಂತಲೂ ಶ್ರೀಧರಸ್ವಾಮಿಗಿಂತ ಮುಂಚೆಯೇ ಸಂಶಯ ಉಂಟಾಗಿತ್ತೆಂದು ತಿಳಿದು ಬರುತ್ತದೆ.
  • ಶ್ರೀ ಬಂಕಿಮಚಂದ್ರರ ‘ಶ್ರೀ ಕೃಷ್ಣ ಚರಿತ್ರೆ –ಅನುವಾದ ಶ್ರೀ ಆರ್.ವ್ಯಾಸರಾವ್ , ಪುಟ 84,85 ;1965ನೇ ಮುದ್ರಣ; ಚೇತನಾ ಪ್ರಿಂಟರ್ಸ್ ಬೆರಂಗಳೂರು-9 ಪ್ರಕಾಶಕರು ಆರ್.ವಿ. ಪ್ರಭಾಕರರಾವ್. ವ್ಯಾಸ ಕೃಪ; 656, 11ನೇ ಮೈನ್ ರಸ್ತೆ ಜಯನಗರ 4ನೇ ಬ್ಲಾಕು, ಬೆಂಗಳೂರು -11
  • ಆದರೆ ಮಹಾಭಾರತದಲ್ಲಿ ಬರುವ ಶ್ರೀ ಕೃಷ್ಣನ ಚರಿತ್ರೆಗೆ ಮಹರ್ಷಿ ದಯಾನಂದರ ಅಥವಾ ಶ್ರೀ ಬಂಕಿಮರ ಆಕ್ಷೇಪವಿಲ್ಲ. ಭಾಗವತದಲ್ಲಿ ಬರವ ಶ್ರೀ ಕೃಷ್ಣನ ಅಮಾನುಷ-ಯಾ- ಅತಿಮಾನುಷ ಅಥವಾ ಅಸಹಜ ಘಟನೆ/ಕಥೆಗಳಿಗೆ ಅವರ ವಿರೋಧವಿದೆ; ಅವುಗಳಿಂದ ಕೃಷ್ಣನ ವ್ಯಕ್ತಿತ್ವಕ್ಕೆ ಹಾನಿಯಾಗಿದೆಯೆಂದು ಹೇಳುತ್ತಾರೆ.

    Tuesday, October 21, 2014