Friday, October 21, 2016

ಸತ್ಯ - ಮಿಥ್ಯ,

ತಾತ್ವಿಕ ಕವನ-ಕಗ್ಗಗಳು


  • ಸತ್ಯ - ಮಿಥ್ಯ,
  • ನಿದ್ದೆ ಕೊಡವಿ ಕಣ್ಣ ತೆರೆಯೆ ಬರಿಯ ಬಯಲ ಭೂಮವು ;
  • ಎದ್ದು ನೋಡೆ ನೆತ್ತಿ ಮೇಲೆ ಹತ್ತಿ ಉರಿವ ಸ್ವಾಮಿಯು ;
  • ಸದ್ದೆ ಇಲ್ಲ ಉದ್ದ ಬಯಲು ಪವನ ಮಂದ ಗಾಮಿಯು ;
  • ಇದ್ದರಿಲ್ಲಿ ನಾನೆ ಒಬ್ಬ ನನಗೆ ನಾನೆ ಸ್ವಾಮಿಯು . ||೧||
-
  • ಜಗದೆ ಇದಕು ಮಿಗಿಲು ಏನು ?-ಇರುವುದೆಲ್ಲ ಇಲ್ಲಿಯೆ ;
  • ಸೊಗವು ಏನು? ಕೊರಗು ಏನು? ತಿರುಳು ಎಲ್ಲ ಇಷ್ಟೆಯೆ ;
  • ಬಗೆಯು ಕೆಡಲು ಇದುವೆ ಭವವು -ಎಲ್ಲ ಮನದೊಳಲ್ಲವೆ?
  • ನಗೆಯ ಕಡಲು ಸುಖದ ಹೊನಲು ಬರಿಯ ಮಿಥ್ಯೆಯಲ್ಲವೆ! ||೨||
-
  • ಇರುಳೊಲೆಲ್ಲ ವಿರಹಬಟ್ಟು ಇನನು ಬರಲು ಅರಳುವ ;
  • ದುಂಬಿ ಮುದಿಸೆ ಬಯಸಿ ಬಳಲಿ ನಿಂತ ಕುಸುಮ ಕುಸುಮಿಪ;
  • ಭಾವ ತುಂಬಿ ನೋಟ ಸೇರಿ ಹೃದಯ ಹೃದಯ ಮಿಡಿಯುವ;
  • ಎಲ್ಲ ಬೆಮೆಯು ಸಾವ ನೋಡೆ ಸನಿಹ ಕುಳಿತು ಕರೆಯುವ. ||೩||
-
  • ಕೋಟಿ ಕೋಟಿ ವರುಷದಿಂದ ಎಣಿಪ ದಿನದ ಸಂಖ್ಯೆಯು,
  • ಸಾಟಿಯಿಲ್ಲವೆಂದು ತಿಳಿವ ಧೀಯ ಕೃತಿಯ ಕಂತೆಯು,
  • ಮೇರೆ ಮೀರಿ ಅರಿವ ಮೀರಿ ಹರಿದ ಜಗದ ಸಂಖ್ಯೆಯು,
  • ಸುಳ್ಳು ಕತೆಯು ಕಾದುಕುಳಿತ ಸಾವು ತಾನು ನುಂಗಲು! ||೪||
-
  • ಟಿಪ್ಪಣಿ: ಭೂಮ -ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ

Sunday, October 2, 2016

ಮಕ್ಕಳ ಕವನ

ಮಕ್ಕಳ ಕವನ
ಮಕ್ಕಳ ಸಾಹಿತ್ಯ
ಮಕ್ಕಳ ಕವನ ವನ್ನು ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ , ಪಂಜೆ ಮಂಗೇಶರಾಯರು, ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ. ಕೆ.ವಿ.ಪುಟ್ಟಪ್ಪ , ಹೊಯಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ.
ಇಲ್ಲಿ ಕೆಲವು ಜನಪ್ರಿಯ ಮಕ್ಕಳ ಕವನಗಳನ್ನು ಉದಾಹರಣೆಗಾಗಿ ಕೊಟ್ಟಿದೆ :
೧) ನಾಗರ ಹಾವೆ ! ವಿಷವಿರುವ ಭಯಂಕರ ಹಾವು ! ಏ ಹಾವೇ ; ಏನಿದು ಅದರಲ್ಲಿ ಸುಂದರ ಕೋಮಲ ಹೂವು ಅರಳುವುದೇ! ಹೆಡೆ ಬಿಚ್ಚಿದಾಗ ಅದರೊಳಗೆ ಹೂವಿನ ಚಿತ್ರ. ಹೆಡೆಯೂ ಹೂವಿನಂತೆ ಬಿಚ್ಚಿ ಅರಳುವುದು. ರುದ್ರ ಸೌಂದರ್ಯ! ಹೊರಗೆ ಬಾ. ಹೊಳಹಿನ ಹೊಂದಲೆ - ಹೊಳೆಯುವ ಹೊನ್ನಿನ ತಲೆ ಹಳದಿ ಬಣ್ಣದ ಬಂಗಾರದ ತಲೆ ಯನ್ನು ಕೊಳಲಿನ ನಾದಕ್ಕೆ ತೂಗು. ತಲೆಯಲ್ಲಿ ರತ್ನವಿದೆ ಎನ್ನುತ್ತಾರೆ -ನಿಜವೇ - ತೋರಿಸು ; ನಾಗರ ಹಾವು ಕೊಪ್ಪರಿಗೆ ಚಿನ್ನವನ್ನು ಕಾಯುತ್ತದೆ ಎಂದು ನಂಬುಗೆ ; ಇದ್ದರೆ ನನಗೆ ಕೊಡು ; ಮೈ ತಣ್ಣಗೆ ಇದ್ದರೂ (ಮನದಲಿ ಬಿಸಿ ಹಗೆ ಸೇಡಿನ ಸಿಟ್ಟು) ನಾಗರ ಹಾವಿಗೆ ಸಿಟ್ಟು ಬಹಳ - ಆದ್ದರಿಂದ ಬೇಗ ಹೋಗು ! (ಠಾವು -ವಸತಿ  ; ಪೋ -ಹೋಗು)
ನಾಗರ ಹಾವೆ!
 ನಾಗರ ಹಾವೆ ಹಾವೊಳು ಹೂವೆ ! ?
 ಬಾಗಿಲ ಬಿಲದಲಿ ನಿನ್ನಯ ಠಾವೆ
 ಕೈಗಳ ಮುಗಿವೆ ಹಾಲನ್ನೀವೆ
 ಬಾ ಬಾ ಬಾ , ಬಾ ಬಾ ಬಾ ||||
 ಹಳದಿಯ ಹೆಡೆಯನು ಬಿಚ್ಚೋ ಬೇಗ,
 ಕೊಳಲನ್ನೂದುವೆ ಲಾಲಿಸು ರಾಗ,
 ಹೊಳಹಿನ ಹೊಂದಲೆ ತೂಗೋ ನಾಗ,
 ನೀ ನೀ ನೀ, ನೀ ನೀ ನೀ ||||'Bold text'
 ಎಲೆ ನಾಗಣ್ಣ ಹೇಳೆಲೊ ನಿನ್ನ ,
 ತಲೆಯಲಿ ರನ್ನ ವಿಹುದನ್ನ ,
 ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ,
 ತಾ ತಾ ತಾ, ತಾ ತಾ ತಾ , ||||
 ಬರಿಮೈ ತಣ್ಣಗೆ ಮನದಲಿ ಬಿಸಿ ಹಗೆ,
 ಎರಡೆಳೆ ನಾಲಗೆ ಇದ್ದರು ಸುಮ್ಮಗೆ,
 ಎರಗುವೆ ನಿನಗೆ ಈಗಲೆ ಹೊರಗೆ ,
 ಪೋ ಪೋ ಪೋ, ಪೋ ಪೋ ಪೋ, ||||
ರಚನೆ : ಪಂಜೆ ಮಂಗೇಶರಾಯರು
ನಮ್ಮ ಮನೆಯ ಸಣ್ಣ ಪಾಪ[ಬದಲಾಯಿಸಿ]
   ನಮ್ಮ ಮನೆಲೊಂದು ಪಾಪನಿರುವುದು
   ಎತ್ತಿಕೊಳಲು ಹೋದರದಕೆ ಕೋಪ ಬರುವುದು ||||

   ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
   ಕಿರುಚಿಕೊಂಡು ತನ್ನ ಮೈಯ್ಯ ಪರಚಿಕೊಳುವುದು ||||
   ಮೈಯ್ಯ ಪರಚಿಕೊಂಡು ಪಾಪ ಅತ್ತು ಕರೆವುದು,
   ಅಳಲು ಕಣ್ಣಿನಿಂದ ಮುತ್ತು ಸುರಿವುದು , ||||
   ಪಾಪ ಅತ್ತರಮ್ಮ ತಾನೂ ಅತ್ತು ಬಿಡವುದು
   ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು || ||
   ಪಾಪ ಪಟ್ಟು ಹಿಡಿದ ಹಟವು ಸಾರ್ಥ ವಾಯಿತು
   ಪರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು ||||
ರಚನೆ: ಜಿ.ಪಿ.ರಾಜರತ್ನಂ
ಕಂದನು ಬಂದ
ಕಂದನು ಬಂದುದು ಎಲ್ಲಿಂದ ?
ನೀಲಿಯ ಗಗನದ ಬಳಿಯಿಂದ ||||
-
ಕಣ್ಣನು ಹೊಂದಿದನಾವಾಗ ?
ಕಂದನ ಚಂದಿರ ಕಂಡಾಗ ||||
-
ಕಣ್ಣನು ಕಳೆಯನು ಪಡೆದಿಹುದು
ಅರಿವೇ ಮೋಹಿಸಿ ಕೊಟ್ಟುದುದು ||||
-
ಕೆನ್ನೆಯುಕೆಂಪಾಗಿಹುದೇಕೆ ?
ದೇವರ ಮುತ್ತನು ಪಡೆದುದಕೆ ||||
-
ಯಾವಾಗಲು ನಗುವನದೇಕೆ ?
ನಾವರಿಯದುದನವನರಿತುದಕೆ
(ನಾವು ಅರಿಯದುದನು ಅವನು ಅರತುದಕೆ - ದೇವರನ್ನು ?)
ರಚನೆ :ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್).
ಬಣ್ಣದ ತಗಡಿನ ತುತ್ತೂರಿ
೩೧-೭-೨೦೧೨
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ ||||
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು||||
ತನಗೇ ತುತ್ತುರಿ ಇದೆಯೆಂದ,
ಬೇರಾರಿಗು ಅದು ಇಲ್ಲೆಂದ, ||||
ಕಸ್ತುರಿ ನಡೆದನು ಬೀದಿಯಲಿ,
ಜಂಬದ ಕೋಳಿಯ ರೀತಿಯಲಿ,||||
ತುತ್ತುರಿಯೂದುತ ಕೊಳದ ಬಳಿ,
ನಡೆದನು ಕಸ್ತುರಿ ಸಂಜೆಯಲಿ. ||||
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ||||
ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು ||||
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತುರಿ ಬೋಳಾಯ್ತು ||||
ಬಣ್ಣದ ತುತ್ತುರಿ ಹಾಳಾಯ್ತು
ಜಂಬದ ಕೋಳಿಗೆ ಗೋಳಾಯ್ತು|||| ಜಿ.ಪಿ ರಾಜರತ್ನಂ.

ಹತ್ತು ಹತ್ತು ಇಪ್ಪತ್ತು,
ಹತ್ತು ಹತ್ತು ಇಪ್ಪತ್ತು,
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ಕೈಯಲ್ಲೊಂದು ಕಲ್ಲಿತ್ತು
ಮೂವತ್ತು ಹತ್ತು ನಲವತ್ತು,
ಎದುರಿಗೆ ಮಾವಿನ ಮರವಿತ್ತು.
ನಲವತ್ತು ಹತ್ತು ಐವತ್ತು
ಮಾವಿನ ಮರದಲಿ ಕಾಯಿತು
ಐವತ್ತು ಹತ್ತು ಅರವತ್ತು
ಕಲ್ಲನುಬೀರಿದ ಸಂಪತ್ತು
ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪನುದುರಿತ್ತು
ಎಪ್ಪತ್ತು ಹತ್ತು ಎಂಭತ್ತು
ಮಾಲಿಯ ಕಂಡನು ಸಂಪತ್ತು.
ಎಂಭತ್ತು ಹತ್ತು ತೊಂಭತ್ತು
ಕಾಲುಗಳೆರಡೂ ಓಡಿತ್ತು
ತೊಂಭತ್ತು ಹತ್ತು ನೂರು
ಓಡುತ ಮನೆಂiiನು ಸೇರು || ಜಿ.ಪಿ ರಾಜರತ್ನಂ.

ಊಟದ ಆಟ
  ಒಂದು ಎರಡು ಬಾಳೆಲೆ ಹರಡು ||
  ಮೂರು ನಾಕು ಅನ್ನ ಹಾಕು ||
  ಐದುಆರು ಬೇಳೆ ಸಾರು ||
  ಏಳು ಎಂಟು ಪಲ್ಯಕೆ ದಂಟು ||
  ಒಂಬತು ಹತ್ತು ಎಲೆ ಮುದಿರೆತ್ತು ||
  ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು||
-- ಜಿ.ಪಿ ರಾಜರತ್ನಂ.||
ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ


ಕಾಗಕ್ಕ ಗುಬ್ಬಕ್ಕನ ಕಥೆ

ಮಕ್ಕಳ ಸಾಹಿತ್ಯ
ಕಥೆ
ಮಕ್ಕಳ ಕಥೆಗಳಲ್ಲಿ ಬಹಳ ಹಿಂದಿನಿಂದ ಮಕ್ಕಳಿಗೆ ಹೇಳುತ್ತಾ ಬಂದ ಜಾನಪದ ಕಥೆ ,ಕಾಗಕ್ಕ ಗುಬ್ಬಕ್ಕನ ಕಥೆ ಬಹಳ ಪ್ರಸಿದ್ಧವಾದುದು. ಮತ್ತು ಜನಪ್ರಿಯವಾದುದು. ಈ ಕಥೆಯನ್ನು ೩ ರಿಂದ ೬-೭ ವಯಸ್ಸಿನವರೆಗಿನ ಮಕ್ಕಳು ಬಹಳ ಇಷ್ಟ ಪಡುತ್ತಾರೆ. ಮಕ್ಕಳಿಗೆ ವಾಸ್ತವತೆಗಿಂತ ರಸ ಭಾವಗಳೇ ಮುಖ್ಯ. ಸಂಭಾಷಣೆ ಇದ್ದರೆ ಮಕ್ಕಳಿಗೆ ಕೇಳಲು ಇಷ್ಟ. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುವುದು ಚಿಕ್ಕ ಮಕ್ಕಳಿಗೆ ಬಹಳ ಇಷ್ಟ . ಆದರೆ ಮಕ್ಕಳು ಈ ಕಥೆಯನ್ನು ಪೂರ್ತಿಯಾಗಿ ಕೇಳಿರುವುದು ವಿರಳ. ಈ ಬಗೆಯ ಕಥೆಗಳನ್ನು ಮಕ್ಕಳಿಗೆ ಮಲಗಿಸಿ ನಿದ್ದೆ ಬರುವವರೆಗೆ ಹೇಳುವುದು ರೂಢಿ. ಸಾಮಾನ್ಯವಾಗಿ ಕಥೆಯು ಅರ್ಧ ಆಗಿರುವಾಗಲೇ ಮಕ್ಕಳಿಗೆ ನಿದ್ದೆ ಬಂದು ಕಥೆ ಅಲ್ಲಿಗೇ ನಿಲ್ಲುವುದು.
. ಕಾಗಕ್ಕ ಮತ್ತು ಗುಬ್ಬಕ್ಕನ ಕಥೆ 

ಕಾಗಕ್ಕನದು ಗುಡಿಸಲು ಸೋಗೆಯ, ಮಣ್ಣಿನ ಸಗಣಿ ಮನೆ (ನೆಲಕ್ಕೆ ಕಲ್ಲು ಹಾಸದಿರುವ ಸಗಣಿ ಹಾಕಿ ದಿನ ದಿನವೂ ಸಾರಿಸುವ ಮನೆ). ಗುಬ್ಬಕ್ಕನದು ಕಲ್ಲಿನ ಮನೆ. ಗಟ್ಟಿ ಮುಟ್ಟಾದ ಪುಟ್ಟ ಮನೆ. ಒಂದು ಬಾರಿ ಬೆಳಿಗ್ಗೆ ದೊಡ್ಡ ಮಳೆ ಬಂದಿತು ಭಾರೀ ಮಳೆ . ಅದರಲ್ಲಿ ಕಾಗಕ್ಕನ ಮಣ್ಣಿ ನ ಮನೆ ಬಿದ್ದು ತೊಳೆದು ಹೋಯಿತು. ಆಗ ಅದು (ಕಾಗಕ್ಕ ) ಹೇಗೋ ಕಷ್ಟಪಟ್ಟು ಗುಬ್ಬಕ್ಕನ ಕಲ್ಲಿನ ಮನೆಗೆ ಬಂದಿತು. ಗುಬ್ಬಕ್ಕ ಬಾಗಿಲನ್ನು ಭದ್ರವಾಗಿ ಹಾಕಿದ್ದಳು. ಆ ಕಾಗಕ್ಕ ಗುಬ್ಬಕ್ಕ ನನ್ನು ಕೂಗಿ ಕೂಗಿ ಕರೆದಳು . ಗುಬ್ಬಕ್ಕ ನಿಗೆ ಗೊತ್ತಾಯಿತು ಇದು ಕಾಗಕ್ಕನ ದನಿ, ಅವಳು ಕೆಟ್ಟವಳು ; ಅತಿ ಆಸೆ ಬುರುಕಳು ; ತೆಗೆದರೆ ತನ್ನ ಮಕ್ಕಳಿಗೆ ಅಪಾಯ ; ತಗೆಯದಿದ್ದರೆ ಮಳೆ ನಿಂತ ಮೇಲೆ ತೊಂದರೆ ಕೊಡುತ್ತಾಳೆ. ಎಂದು ಯೋಚಸಿದಳು. ಅದಕ್ಕೆ ಆದಷ್ಟು ಸಾವಕಾಶ ಮಾಡಬೇಕು ಎಂದು ಉಪಾಯ ಮಾಡಿದಳು.
ಗುಬ್ಬಕ್ಕ : ಅದು ಯಾರು ? ಎಂದಳು .
ಕಾಗಕ್ಕ : ನಾನು ಕಾಗಕ್ಕ,. ಗಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತೆಗೆ ಎಂದಳು.
ಗುಬ್ಬಕ್ಕ : ಸ್ವಲ್ಪ ತಡೆ ; ಮಗುವಿಗೆ ಎಣ್ಣೆ ಹಚ್ಚು ತ್ತಿದ್ದೇನೆ ಎಂದಳು.
ಸ್ವಲ್ಪ ತಡೆದು,
ಕಾಗಕ್ಕ : ಗಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತೆಗೆ ಎಂದಳು.
ಗುಬ್ಬಕ್ಕ : ಸ್ವಲ್ಪ ತಡೆ ; ಮಗುವಿಗೆ ಎಣ್ಣೆ ಸ್ನಾನ ಮಾಡಿಸುತ್ತಿದ್ದೇನೆ ಎಂದಳು.
(ಟಿಪ್ಪಣಿ :- ಹೀಗೆ ಮಗುವಿಗೆ ಸ್ನಾನ, ಮೈ ಒರೆಸುವುದು, ಧೂಪ ತೋರಿಸುವುದು,
ಹಾಲು ಕುಡಿಸುವುದು ; ತೊಟ್ಟಿಲಲ್ಲಿ ಮಲಗಿಸುವುದು, ತೊಟ್ಟಿಲುತೂಗುವುದು, ನಿದ್ದಮಾಡಿಸುವುದು ಮೊದಲಾದ ಮಗುವಿಗೆ ಮಾಡಬೇಕಾದ ಎಲ್ಲಾ ಉಪಚಾರಗಳನ್ನ ಹೇಳಿ "ಸ್ವಲ್ಪ ತಡೆ", ಎನ್ನುತ್ತಾ ಕಾಲ ಕಳೆಯುತ್ತಾಳೆ ಗುಬ್ಬಕ್ಕ. - ಕಥೆ ಹೇಳುವ ತಾಯಿ, ತನ್ನ ಮಗುವಿಗೆ ಏನೇನು ಮಾಡುತ್ತಾಳೋ ಅದನ್ನೆಲ್ಲಾ ಹೇಳಿ "ಸ್ವಲ್ಪ ತಡೆ ", ಎನ್ನುವುದು ; ಕಾಗಕ್ಕ ಪುನಃ ಅದೆರೀತಿ ಕರೆಯುವುದು ಈ ಕತೆ ಕೇಳುವ ಮಗುವಿಗೆ ನಿದ್ದೆ ಬರುವವರೆಗೂ ಎಳೆಯಲ್ಪಡುವುದು. ಮಗು ಗುಬ್ಬಿಯ ಮಗುವಿನ ಜಾಗದಲ್ಲಿ ತನ್ನನ್ನೇ ಕಲ್ಪಿಸಿಕೋಡು, ಆ ಸುಖವನ್ನೂ, ಆನಂದವನ್ನೂ ಅನುಭವಿಸುತ್ತದೆ. ಕಾಗಕ್ಕ ಯಾವಾಗ ಒಳಗೆ ಬರುತ್ತಾಳೋ ಎಂದು ಆಸಕ್ತಿಯಿಂದ ಕೇಳುವುದು. ಆದರೆ ಪ್ರತಿದಿನವೂ ನಿದ್ದೆ ಬಂದು ಕತೆ ಪೂರ್ಣ ಆಗುವುದಿಲ್ಲ. ಕೆಲವರು ಅಡಿಗೆಗೆ ಒಲೆ ಹಚ್ಚುವುದರಿಂದ ಆರಂಭಿಸುತ್ತಾರೆ.)
ಕಾಗಕ್ಕ ಎಷ್ಟು ಕಾಯಿಸಿದರೂ ಹೋಗುವುದಿಲ್ಲ. ಕೊನೆಗೆ ಗುಬ್ಬಕ್ಕ ಬಂದು ಬಾಗಿಲನ್ನು ಸ್ವಲ್ಪವೇ ತೆಗೆಯುತ್ತಾಳೆ.
ಕಾಗಕ್ಕ : ಗುಬ್ಬಕ್ಕಾ ನನ್ನ ಕೊಕ್ಕು ಮಾತ್ರಾ ಹಿಡಿಯುತ್ತೆ ಇನ್ನೂ ಸ್ವಲ್ಪ ದೊಡ್ಡದಾಗಿ ತೆಗೆ.
ಗುಬ್ಬಕ್ಕ ಮತ್ತೆ ಸ್ವಲ್ಪವೆ ತೆರೆದಳು,
ಕಾಗಕ್ಕ : ಗುಬ್ಬಕ್ಕಾ ನನ್ನ ಕುತ್ತಿಗೆ ಮಾತ್ರಾ ಹಿಡಿಯುತ್ತೆ ಇನ್ನೂ ಸ್ವಲ್ಪ ದೊಡ್ಡದಾಗಿ ತೆಗೆ.
ಗುಬ್ಬಕ್ಕ ಮತ್ತೆ ಸ್ವಲ್ಪವೆ ತೆರೆದಳು,
ಕಾಗಕ್ಕ : ಗುಬ್ಬಕ್ಕಾ ನನ್ನ ಹೊಟ್ಟೆ ಮಾತ್ರಾ ಹಿಡಿಯುತ್ತೆ ಇನ್ನೂ ಸ್ವಲ್ಪ ದೊಡ್ಡದಾಗಿ ತೆಗೆ.
ಗುಬ್ಬಕ್ಕ ಮತ್ತೆ ಸ್ವಲ್ಪವೆ ತೆರೆದಳು, (ಮೊ =ಮ್+ಒ)
ಕಾಗಕ್ಕ ಒಳಗೆ ಬಂದಳು. ಗುಬ್ಬಕ್ಕನಿಗೆ ಹೆದರಿಕೆ. ತನ್ನ ಮಕ್ಕಳನ್ನು ಎಲ್ಲಿ ತಿನ್ನುವಳೋ, ಎಲ್ಲಿ ತನ್ನ ಮೊಟ್ಟೆ ಗಳನ್ನು ತಿನ್ನುವಳೋ ಎಂಬ ಭಯ.
ಕಾಗಕ್ಕ : ಗುಬ್ಬಕ್ಕಾ ನಾನು ಮಳೆಯಲ್ಲಿ ನೆನೆದು ಚಳಿ ;ಒಲೆಯ ಹತ್ತಿರ ಮಲಗುತ್ತೇನೆ ಎಂದಳು /ಎಂದಿತು.
ಅಲ್ಲಿ ಒಲೆಯ ಸಂದಿನ ಮೂಲೆಯಲ್ಲಿ ಗುಬ್ಬಕ್ಕನ ಮೂರು ಮೊಟ್ಟೆ ಇತ್ತು . ಗುಬ್ಬಕ್ಕ ಬೇಡವೆಂದರೂ ಬಿಡದೆ ಕಾಗಕ್ಕ ಒಲೆಯ ಹತ್ತಿರ ಬಂದು ಬೆಂಕಿ *ಕಾಯಿಸಿ ಕೊಳ್ಳುತ್ತಾ ಮಲಗಿತು. ಸಂಜೆಯಾಯಿತು. ಕತ್ತಲಾಯಿತು. ಮಳೆ ಬಿಡಲಿಲ್ಲ. ಕಾಗಕ್ಕ ಒಲೆಯ ಹತ್ತಿರವೇ ಇತ್ತು.
ಕಾಗಕ್ಕ : ನನ್ನ ಮನೆ ಬಿದ್ದು ಹೋಗಿದೆ ನಾನು ಇಲ್ಲಿಯೇಇದ್ದು ಬೆಳಿಗ್ಗೆ ಮುಂಚೆ ಹೋಗುತ್ತೇನೆ ಎಂದಳು.
ಗುಬ್ಬಕ್ಕ ಎನೂ ಮಾಡಲೂ ಆಗದೆ ಸುಮ್ಮನಿತ್ತು.
ಗುಬ್ಬಕ್ಕ ಮಗುವಿನ ಜೊತೆ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಮಲಗಿತು .
ಅರ್ಧ ರಾತ್ರಿಯಾಯಿತು. ಕಾಗಕ್ಕನಿಗೆ ಹಸಿವು. ಒಲೆಯ ಹತ್ತಿರ ಹುಡುಕಿತು . ಮೂರು ಮೊಟ್ಟೆ ಕಂಡಿತು. ಒಲೆಯಲ್ಲಿ ಬಿಸಿ ಬೂದಿ ಇತ್ತು . ಒಂದು *ಮೊಟ್ಟೆಯನ್ನು ಬಿಸಿ ಬೂದಿಯಲ್ಲಿ ಹಾಕಿ ಬೇಯಿಸಿತು.
ಮೊಟ್ಟೆ -ಢಬ್ -ಎಂದು ಒಡೆದು ಸದ್ದು ಮಾಡಿತು. ಕಾಗಕ್ಕ ತಕ್ಷಣ ಅದನ್ನು ತೆಗೆದು ನುಂಗಿತು.
ಗುಬ್ಬಕ್ಕ : ಕಾಗಕ್ಕಾ ಅದೇನು ಸದ್ದು ?-ಢಬ್ - ಎಂದಿತಲ್ಲಾ ಎಂದು ಕೋಣೆ ಯಿಂದ ಕೂಗಿ ಕೇಳಿತು.
ಕಾಗಕ್ಕ : ನಾನು ಬರುವಾಗ ಮೂರು ಹಲಸಿನ ಬೀಜ ತಂದಿದ್ದೆ ಅದನ್ನ ಒಲೆಗೆ ಹಾಕಿದಾಗ, ಅದು ಢಬ್ ಎಂದಿತು ಎಂದು ಹೇಳಿತು.
ಮತ್ತೆ ಒಂದು ತಾಸು ಬಿಟ್ಟು . ಕಾಗಕ್ಕ ಇನ್ನೊಂದು ಮೊಟ್ಟೆಯನ್ನ ಒಲೆಗೆ ಹಾಕಿತು ಅದು -ಢಬ್ ಎಂದು ಸದ್ದು ಮಾಡಿತು.
ಪುನಃ ಗುಬ್ಬಕ್ಕ : ಕಾಗಕ್ಕಾ ಅದೇನುಸದ್ದು -ಢಬ್ - ಎಂದಿತಲ್ಲಾ ಎಂದು ಕೋಣೆ ಯಿಂದ ಕೂಗಿ ಕೇಳಿತು.
ಕಾಗಕ್ಕ : ನಾನು ಬರುವಾಗ ಮೂರು ಹಲಸಿನ ಬೀಜ ತಂದಿದ್ದೆ ಎರಡನೇ ಬೀಜ ಒಲೆಗೆ ಹಾಕಿದಾಗ, ಅದು ಢಬ್ ಎಂದಿತು ಎಂದು ಹೇಳಿತು.
ಮತ್ತೆ ಒಂದು ತಾಸು ಬಿಟ್ಟು . ಕಾಗಕ್ಕ ಇನ್ನೊಂದು ಮೊಟ್ಟೆಯನ್ನ ಒಲೆಗೆ ಹಾಕಿತು ಅದು -ಢಬ್ ಎಂದು ಸದ್ದು ಮಾಡಿತು.
ಪುನಃ ಗುಬ್ಬಕ್ಕ : ಕಾಗಕ್ಕಾ ಅದೇನು ಸದ್ದು -ಢಬ್ - ಎಂದಿತಲ್ಲಾ ಎಂದು ಕೋಣೆ ಯಿಂದ ಕೂಗಿ ಕೇಳಿತು.
ಕಾಗಕ್ಕ : ನಾನು ಬರುವಾಗ ಮೂರು ಹಲಸಿನ ಬೀಜ ತಂದಿದ್ದೆ ಮೂರನೇ ಬೀಜ ಒಲೆಗೆ ಹಾಕಿದಾಗ, ಅದು ಢಬ್ ಎಂದಿತು ಎಂದು ಹೇಳಿತು.
ಬೆಳಿಗ್ಗೆ ಮುಂಚೆ ಗುಬ್ಬಕ್ಕ ಏಳುವುದರೊಳಗೆ ಕಾಗಕ್ಕ ಎದ್ದು ಬಾಗಿಲು ತೆಗೆದುಕೊಂಡು ಹಾರಿ ಹೋಯಿತು.
ಗುಬ್ಬಕ್ಕ ಬೆಳಿಗ್ಗೆ ಎದ್ದು ನೋಡಿದರೆ ಮೂರೂ ಮೊಟ್ಟೆ ಇಲ್ಲ . ಅದಕ್ಕೆ ಈ ಕಾಗಕ್ಕನೇ ತನ್ನ ಮೂರೂ ಮೊಟ್ಟೆಗಳನ್ನ ತಿಂದು ಹಾಕಿದೆ ಎಂದು ಗೊತ್ತಾಯಿತು. ದುಃಖದಿದ ಕಣ್ಣೀರು ಹಾqಕಿತು
ಮಾರನೇ ದಿನ ಕಾಗಕ್ಕ ಬಂದು ಗುಬ್ಬಕ್ಕಾ ಹೇಗಿದ್ದೀಯಾ ಎಂದು ಕೇಳಿತು. ಆಗ ಗುಬ್ಬಕ್ಕ ಕಾಗಕ್ಕಾ ಸ್ವಲ್ಪ ಕಷಾಯ ಮಾಡಿದ್ದೇನೆ ಶೀತಕ್ಕೆ ಒಳ್ಳೆಯದು ಕೊಡಲಾ ಎಂದಿತು. ಕಾಗಕ್ಕ ಕೊಡು ನನಗೆ ಅದು ಇಷ್ಟ ಎಂದಿತು. ಗುಬ್ಬಕ್ಕ ಒಳಗೆ ಹೋಗಿ ಒಂದು ಸೌಟಿನಲ್ಲಿ ಎಣ್ಣೆ ಮೆಣಸಿನಕಾಯಿ ಹಾಕಿ ಕಾಯಿಸಿತು. ನಂತರ ತಂದು ಸ್ವಲ್ಪವೇ ಬಾಗಿಲು ತೆಗೆದು ಕಾಗಕ್ಕಾ ಬಾಯಿ ಕಳಿ(ತೆರೆ) ಎಂದಿತು.
ಕಾಗಕ್ಕ ಬಾಯಿ ಕಳೆಯಿತು (ತೆರೆಯಿತು). ಗುಬ್ಬಕ್ಕ ಕಾಯಿಸಿದ ಒಗ್ಗರಣೆಯನ್ನ ಅದರ ಬಾಯಿಯ ಒಳಗೆ ಹಾಕಿಬಿಟ್ಟಿತು. ಕಾಗಕ್ಕ ಅಯ್ಯೋ ಉರಿ ಉರಿ ಎನ್ನುತ್ತಾ ಕೂಗಿಕೊಂಡಿತು. *ಗುಬ್ಬಕ್ಕ ನೀನು ನನ್ನ ಮೊಟ್ಟೆಗಳನ್ನು ಕದ್ದು ತಿಂದಿದ್ದಕ್ಕೆ ಈ ಶಿಕ್ಷೆ ಎಂದು ಹೇಳಿ ಬಾಗಿಲು ಹಾಕಿಕೊಂಡಿತು. ಕಾಗಕ್ಕನ ಬಾಯಿ ನಾಲಗೆ ಸುಟ್ಟು ಕೆಂಪಾಯಿತು . *ಅದು ಈಗಲೂ ಹಾಗೆಯೇ ಕೆಂಪಾಗಿದೆ. (ಚಂ)