Friday, October 21, 2016

ಸತ್ಯ - ಮಿಥ್ಯ,

ತಾತ್ವಿಕ ಕವನ-ಕಗ್ಗಗಳು


  • ಸತ್ಯ - ಮಿಥ್ಯ,
  • ನಿದ್ದೆ ಕೊಡವಿ ಕಣ್ಣ ತೆರೆಯೆ ಬರಿಯ ಬಯಲ ಭೂಮವು ;
  • ಎದ್ದು ನೋಡೆ ನೆತ್ತಿ ಮೇಲೆ ಹತ್ತಿ ಉರಿವ ಸ್ವಾಮಿಯು ;
  • ಸದ್ದೆ ಇಲ್ಲ ಉದ್ದ ಬಯಲು ಪವನ ಮಂದ ಗಾಮಿಯು ;
  • ಇದ್ದರಿಲ್ಲಿ ನಾನೆ ಒಬ್ಬ ನನಗೆ ನಾನೆ ಸ್ವಾಮಿಯು . ||೧||
-
  • ಜಗದೆ ಇದಕು ಮಿಗಿಲು ಏನು ?-ಇರುವುದೆಲ್ಲ ಇಲ್ಲಿಯೆ ;
  • ಸೊಗವು ಏನು? ಕೊರಗು ಏನು? ತಿರುಳು ಎಲ್ಲ ಇಷ್ಟೆಯೆ ;
  • ಬಗೆಯು ಕೆಡಲು ಇದುವೆ ಭವವು -ಎಲ್ಲ ಮನದೊಳಲ್ಲವೆ?
  • ನಗೆಯ ಕಡಲು ಸುಖದ ಹೊನಲು ಬರಿಯ ಮಿಥ್ಯೆಯಲ್ಲವೆ! ||೨||
-
  • ಇರುಳೊಲೆಲ್ಲ ವಿರಹಬಟ್ಟು ಇನನು ಬರಲು ಅರಳುವ ;
  • ದುಂಬಿ ಮುದಿಸೆ ಬಯಸಿ ಬಳಲಿ ನಿಂತ ಕುಸುಮ ಕುಸುಮಿಪ;
  • ಭಾವ ತುಂಬಿ ನೋಟ ಸೇರಿ ಹೃದಯ ಹೃದಯ ಮಿಡಿಯುವ;
  • ಎಲ್ಲ ಬೆಮೆಯು ಸಾವ ನೋಡೆ ಸನಿಹ ಕುಳಿತು ಕರೆಯುವ. ||೩||
-
  • ಕೋಟಿ ಕೋಟಿ ವರುಷದಿಂದ ಎಣಿಪ ದಿನದ ಸಂಖ್ಯೆಯು,
  • ಸಾಟಿಯಿಲ್ಲವೆಂದು ತಿಳಿವ ಧೀಯ ಕೃತಿಯ ಕಂತೆಯು,
  • ಮೇರೆ ಮೀರಿ ಅರಿವ ಮೀರಿ ಹರಿದ ಜಗದ ಸಂಖ್ಯೆಯು,
  • ಸುಳ್ಳು ಕತೆಯು ಕಾದುಕುಳಿತ ಸಾವು ತಾನು ನುಂಗಲು! ||೪||
-
  • ಟಿಪ್ಪಣಿ: ಭೂಮ -ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ

No comments:

Post a Comment