Tuesday, November 1, 2011

ಆದಿ ಶಂಕರರ ಜೀವನಆದಿ ಶಂಕರರ ಜೀವನದ ಇತಿಹಾಸವನ್ನು ನಿಖರವಾಗಿ ತಿಳಿಯುವುದು ಕಷ್ಟ. ಮಾಧವೀಯ ಶಂಕರ ವಿಜಯವೇ ಪ್ರಾಚೀನವಾದುದು. [ಮಾಧವ ಕವಿ ವಿರಚಿತ-೧೪ನೇ ಶ.: ಚಿದ್ವಿಲಾಸೀಯ ಶಂಕರ ವಿಜಯಮ್-ಕವಿ ಚಿದ್ವಿಲಾಸ೧೫-೧೭ನೇಶ.; ಕೇರಳೀಯ ಶಂಕರಶಂಕರ ವಿಜಯಮ್-೧೭ನೇಶ.]

ಬಾಲ್ಯ :- ಶ್ರೀ ಶಂಕರರ ತಂದೆ ಕಾಯ್‌ಪಿಳ್ಳೆ ಶಿವಗುರು ನಂಬೂದರಿ; ತಾಯಿ ಆರ್ಯಾಂಬಾ. ಅವರು ಬಹಳ ವರ್ಷ ಮಕ್ಕಳಾಗದಿದ್ದುದರಿಂದ ತ್ರಿಶೂರಿನ ವಡಕ್ಕನಾಥನ ಪ್ರಾರ್ಥನೆ ಮಾಡಿಕೊಂಡರು. ಅದರ ಫಲವಾಗಿ ಶ್ರೀ ಶಂಕರರು ಕೇರಳದ ಕಾಲಡಿ ಎಂಬ ಊರಿನಲ್ಲಿ ಅಥವಾ ಅದರ ಹತ್ತಿರ ಕ್ರಿ. ಶ. ೭೮೮ ರಲ್ಲಿ ಶುಭ ನಕ್ಷತ್ರದಲ್ಲಿ ಜನಿಸಿದರು.

ಕಾಲಡಿಯ ಜನ್ಮ ಸ್ಥಳ, ,, ಶ್ರೀ ಶಂಕರರ ಕೀರ್ತಿ ಸ್ಥಂಭ, ಕಾಲಡಿ

ತಂದೆ ಶಿವಗುರು, ಶಂಕರರು ಚಿಕ್ಕವರಿದ್ದಾಗಲೇ ತೀರಿಕೊಂಡರು. ಶಂಕರರು ಐದು ವರ್ಷದವರಿದ್ದಾಗಲೇ ಅವರ ಉಪನಯನವನ್ನು ತಾಯಿ ಆರ‍್ಯಾಂಬಾ ನೆರವೇರಿಸಿದರು. ಅಸಾಧಾರಣ ಮೇಧಾವಿಯಾದ ಶಂಕರರು ಎಂಟು ವರ್ಷಕ್ಕೇ ನಾಲ್ಕು ವೇದಗಳನ್ನೂ ಕಲಿತು ಕರಗತ ಮಾಡಿಕೊಂಡರು. ಬೇರೆ ಬೇರೆ ಗುರುಗಳಿಂದ ಷಡ್ದರ್ಶನಗಳನ್ನೂ ಪುರಾಣಗಳನ್ನೂ , ಸಕಲ ಶಾಸ್ತ್ರಗಳನ್ನೂ ಹನ್ನೆರಡನೇ ವರ್ಷಕ್ಕೆಲ್ಲಾ ಕಲಿತು ಸರ್ವ ಶಾಸ್ತ್ರ ವಿಶಾರದರಾದರು.

ಸಂನ್ಯಾಸ :- ಅವರಿಗೆ ಚಿಕ್ಕಂದಿನಲ್ಲೇ ಸಂನ್ಯಾಸದ ಕಡೆ ಒಲವಿದ್ದರೂ ತಾಯಿ ಒಪ್ಪಿರಲಿಲ್ಲ. ಈಬಗ್ಗೆ ಒಂದು ಕಥೆ ಇದೆ. ಅವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅವರ ಕಾಲನ್ನು ಹಿಡಿಯಿತೆಂದೂ, ಆಗ ಕೊನೆಯ ಹೊತ್ತಿಗೆ ಸಂನ್ಯಾಸ ಸ್ವೀಕರಿಸಲು ಅಲ್ಲಿಯೇ ಇದ್ದ ತಾಯಿ ಒಪ್ಪಲು ಅವರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಲು ಮೊಸಳೆ ಅವರ ಕಾಲು ಬಿಟ್ಟಿತು. ನಂತರ ಅವರು ಗುರುವನ್ನು ಅರಸತ್ತಾ ಉತ್ತರದ ಕಡೆ ಹೊರಟರು.

ಗುರು ದರ್ಶನ :- ಸಂನ್ಯಾಸ ಸ್ವೀಕರಿಸಿದ ಶಂಕರರು ತಮಗೆ ತಕ್ಕ ಗುರುಗಳನ್ನು ಅರಸುತ್ತಾ ಉತ್ತರದ ನರ್ಮದಾ ತಟದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಕಂಡರು. ಅವರು ಇವರ ಪರಿಚಯ ಕೇಳಲು, ಅದ್ವೈತ ತತ್ವಾರ್ಥವಿರುವ ಶ್ಲೋಕದಲ್ಲಿ ಶಂಕರರು ಉತ್ತರಿಸಿ ನಮಸ್ಕರಿಸಿದರು. ಗೋವಿಂದ ಭಗವತ್ಪಾದರು ಮೆಚ್ಚಿ ಒಪ್ಪಲು, ಅವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು. ಗೋವಿಂದ ಭಗವತ್ಪಾದರು ಗೌಡಪಾದ ಮುನಿಗಳ ಶಿಷ್ಯರು. ಗೌಡ ಪಾದ ಮುನಿಗಳು ಮಾಂಡೂಕ್ಯ ಉಪನಿತ್ತಿಗೆ ಭಾಷ್ಯ ಬರೆದು, ಅದಕ್ಕೆ ಅದ್ವೈತ ಸಿದ್ಧಾಂತದ ಕಾರಿಕೆಯನ್ನು ೫೨ ಶ್ಲೋಕಗಳಲ್ಲಿ ಬರೆದಿದ್ದಾರೆ. ಅದನ್ನೇ ವಿಸ್ತರಿಸಿ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಲು ಗೋವಿಂದ ಭಗವತ್ಪಾದರು ತಮ್ಮಲ್ಲಿ ಅಭ್ಯಾಸ ಮಾಡಿ ಮುಗಿದ ನಂತರ ಶಂಕರರಿಗೆ ಹೇಳಿದರು. ಶಂಕರರು ಒಪ್ಪಿ ಕಾಶಿಗೆ ಹೊರಟರು.

ಶಂಕರರ ಸಂಚಾರ ಮತ್ತು ದಿಗ್ವಿಜಯ : ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ಚೋಳ ದೇಶದ [ತಮಿಳು] ಯುವಕ ಸಂನ್ಯಾಸಿ ಇವರ ಶ್ಯಿಷ್ಯನಾದನು; [ಪದ್ಮಪಾದ]. ಅವರು ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಕಥೆ ಇದೆ. ಒಬ್ಬ ಅಸ್ಪೃಶ್ಯ [ಚಾಂಡಾಲ] ವ್ಯಕ್ತಿಯು ದಾರಿಯಲ್ಲಿ ಎದುರಿಗೆ ಬರಲು ಅವನಿಗೆ ಪಕ್ಕಕ್ಕೆ ಸರಿಯಲು ಹೇಳಿದಾಗ ಅವನು ನೀನು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ? ಎಂದು ಕೇಳಲು. ಅವನೇ ತನ್ನನ್ನು ಪರೀಕ್ಷಿಸಲು ಬಂದ ಪರಶಿವನೆಂದು ಅರಿತು ಅವನಿಗೆ ಕೈ ಮುಗಿದು ಐದು ಶ್ಲೋಕಗಳಿಂದ ಸ್ತುತಿಸಿದರು. ಅದು ಮನೀಷಿ ಪಂಚಕವೆಂದು ಪ್ರಸಿದ್ಧಿಯಾಗಿದೆ.

ಅಲ್ಲಿಂದ ಬದರಿಗೆ ಹೋಗಿ ಅಲ್ಲಿ ತಮ್ಮ ಪ್ರಸಿದ್ಧವಾದ ಭಾಷ್ಯಗಳನ್ನು ಬರೆದರು. ಅವು ಪ್ರಕರಣ ಗ್ರಂಥ ಗಳೆಂದು [ತತ್ವಾರ್ಥ] ಪ್ರಸಿದ್ಧವಾಗಿವೆ. ಬ್ರಹ್ಮ ಸೂತ್ರ, ಭಗವದ್ಗೀತಾ, ಮತ್ತು ದಶ ಉಪನಿಷತ್‌ಗಳ ಭಾಷ್ಯ ಗಳೇ ಪ್ರಸ್ಥಾನತ್ರಯ ಭಾಷ್ಯಗಳು; ಪ್ರಕರಣ ಗ್ರಂಥಗಳು.. ಈಶ, ಕೇನ ಕಠ; ಪ್ರಶ್ನ, ಮುಂಡಕ, ಮಾಂಡೂಕ್ಯ; ಐತರೇಯ, ತೈತ್ತರೀಯ; ಬೃಹದಾರಣ್ಯಕ, ಛಾಂದೋಗ್ಯ, ಇವು ಆ ದಶ ಉಪನಿಷತ್ತುಗಳು.

ನಂತರ ಅವರು ಪ್ರಯಾಗದಲ್ಲಿ ಉಮಿಹೊಟ್ಟಿನ ಬೆಂಕಿಯಲ್ಲಿ ಕುಳಿತಿದ್ದ ಪ್ರಸಿದ್ಧ ಮೀಮಾಂಸಕ ಪಂಡಿತರಾದ ಕುಮಾರಿಲ ಭಟ್ಟರನ್ನು ಬೆಟ್ಟಿಯಾದರು. ಅವರು ಬೌದ್ಧ ಗರುಗಳಿಗೆ ಸುಳ್ಳು ಹೇಳಿ ಶಿಷ್ಯರಾಗಿ ಬೌದ್ಧಧರ್ಮದ ರಹಸ್ಯವನ್ನು ಕಲಿತಿದ್ದರು. ಅದರ ಪ್ರಾಯಶ್ಚಿತ್ತವಾಗಿ ಅಗ್ನಿ ಪ್ರವೇಶ ಮಾಡಿದ್ದರು. ಅವರು ತಮ್ಮ ಶಿಷ್ಯ ಮಂಡನ ಮಿಶ್ರರನ್ನು ಕಂಡು ವಾದ ಮಾಲು ಹೇಳಿದರು.

ಮೀಮಾಂಸಕ ಮಂಡನ ಮಿಶ್ರರ ಭೇಟಿ :- ವೇದಗಳ ಅಂತಿಮ ತಾತ್ಪರ್ಯ ಅದ್ವೈತ ಸಿದ್ಧಾಂತವೆಂದು ಸಾಧಿಸಲು ಅಂದಿನಕಾಲದ ಅತ್ಯಂತ ಪ್ರಸಿದ್ಧ ಮೀಮಾಂಸ ಪಂಡಿತರಾದ, ಕರ್ಮವೇ ವೇದ ತಾತ್ಪರ್ಯವೆಂದು ಹೇಳುವ ಮಂಡನಮಿಶ್ರರನ್ನು ಕಾಣಲು ಮಾಹಿಷ್ಮತಿ ನಗರಕ್ಕೆ [ಇಂದಿನ ಬಿಹಾರದಲ್ಲಿರುವ ಮಹಿಷಿ ಬಂಗಾವನ್ ಸಹರ‍್ಸ] ಹೋದರು. ಅವರೊಡನೆ ಹದಿನೈದು ದಿನಗಳ ಕಾಲ ಸತತ ವಾದ ಮಾಡಿದರು. ಮಿಶ್ರರ ಪತ್ನಿ ಉಭಯ ಭಾರತಿಯೇ ನಿರ್ಣಾಯಕಿ. ಅವಳು ತನ್ನ ಪತಿ ಮಿಶ್ರರು ವಾದದಲ್ಲಿ ಸೋತಿರವುದಾಗಿ ತೀರ್ಪು ಕೊಟ್ಟಳು. ಆದರೆ ತನ್ನನ್ನೂ ಗೆಲ್ಲಬೇಕೆಂದು ಪಂಥವನ್ನು ಮಾಡಿದಳು. ಅವಳು ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆ ಗಳನ್ನು ಕೇಳಿದಳು. ಬಾಲ ಸಂನ್ಯಾಸಿಗಳಾದ ಶಂಕರರಿಗೆ ಉತ್ತರ ಗೊತ್ತಿರಲಿಲ್ಲ. ಆವರು ಆರು ತಿಂಗಳ ಸಮಯ ಕೇಳಿದರು. ಅದರಂತೆ ಅವರು ಅಕಾಲ-ಮರಣ ಹೊಂದಿದ ವಿಕ್ರಮ ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ, ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆ ಗಳಿಗೆ ಉತ್ತರ ತಿಳಿದು, ತಮ್ಮ ವಾದ ಬರೆದರು. ಪುನಹ ತಮ್ಮ ದೇಹ ಸೇರಿ ಆ ಗ್ರಂಥವನ್ನು ಭಾರತಿ ದೇವಿಗೆ ಕೊಟ್ಟು ಉತ್ತರವನ್ನು ಕಂಡುಕೊಳ್ಳಲು ಹೇಳಿದರು . ಅವಳು ಆ ಉತ್ತರವನ್ನು ಒಪ್ಪಲು, ಮೊದಲೇ ಮಾಡಿಕೊಂಡ ನಿಯಮದಂತೆ ಮಂಡನ ಮಿಶ್ರರು ಸುರೇಶ್ವರಾಚಾರ್ಯರಂಬ ಹೆಸರಿನಲ್ಲಿ ಸಂನ್ಯಾಸಿಗಳಾಗಿ ಶಂಕರರ ಶಿಷ್ಯರಾದರು. ಉಭಯಭಾರತಿಯೂ ಅವರನ್ನು ಹಿಂಬಾಲಿಸಿದಳು. ಕೊನೆಗೆ ಶೃಂಗೇರಿಯ ಶಾರದಾ ಪೀಠದಲ್ಲಿ ನೆಲಸಿದಳೆಂದು ಪ್ರತೀತಿ ಇದೆ. ಮಂಡನಮಿಶ್ರರೇ ಮುಂದೆ ದಕ್ಷಿಣಾಮ್ನಾಯ ಶಂಕರ ಮಠದ ಶೃಂಗೇರಿಯ ಪೀಠಾಧಿಪತಿಗಳಾಗಿ ಶಂಕರರ ಗ್ರಂಥಗಳಿಗೆ ವಾರ್ತಿಕಗಳನ್ನು [ಟೀಕೆ] ಬರೆದು ವಾರ್ತಿಕಕಾರರೆನಿಸಿದರು.

,,,, ,೩ ೪ ೫

೧.ಶೃಂಗೇರಿಯ ಶಾರದಾಂಬಾ ಪೀಠ [ದೇವಾಲಯ] ೨. ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿರುವ ಶಂಕರರ ಸಮಾಧಿ ಮಂದಿರದಲ್ಲಿರುವ ಆದಿ ಶಂಕರರ ಪ್ರತಿಮೆ. ೩.ಶ್ರೀಶಂಕರರು ತಮ್ಮ ನಾಲ್ವರು ಪ್ರಮುಖ ಶಿಷ್ಯರೊಂದಿಗೆ. ೪. ಶ್ರೀಶಂಕರರು ; ೫. ಶೃಂಗೇರಿಯ ಶಾರದಾಂಬಾ

[ಚಿತ್ರ ೩, , ರಾಜಾ ರವಿ ವರ್ಮನು ರಚಿಸಿದ ತೈಲ ಚಿತ್ರ.- ವಿಕಿಪೀಡಿಯಾ ]

ಅವರು ಕಾಶಿ ಯಿಂದ ಮಹಾರಾಷ್ಟ್ರ ಕ್ಕೆ ಶಿಷ್ಯರೊಡನೆ ಪ್ರಯಾಣ ಮಾಡಿ, ಅಲ್ಲಿಂದ ಶ್ರೀಶೈಲಕ್ಕೆ ಹೋದರು.ಅಲ್ಲಿ ಅವರು ಶಿವಾನಂದಲಹರಿಯನ್ನು ರಚಿಸಿದರು. ಶ್ರೀಶೈಲದಲ್ಲಿ ಅಥವಾ ಶಂಕರರು ಶ್ರೀಶೈಲದಿಂದ ಗೋಕರ್ಣಕ್ಕೆ ಬರುವಾಗ ಒಬ್ಬ ಕಾಪಾಲಿಕನು ಅವರ ಒಪ್ಪಿಗೆಯನ್ನು ಹೇಗೋ ಪಡೆದು ಅವರನ್ನೇ ಬಲಿಕೊಡಬೇಕೆಂದು ಪ್ರಯತ್ನಿಸಿದನು. ಇದನ್ನು ತಿಳಿದ ಶಂಕರರ ಶಿಷ್ಯ ಪದ್ಮಪಾದರು ನರಸಿಂಹನನ್ನು ಪ್ರಾರ್ಥಿಸಲು, ಉಗ್ರ ನರಸಿಂಹನು ಪ್ರತ್ಯಕ್ಷನಾಗಿ ಶಂಕರರನ್ನು ಕಾಪಾಡಿದನು. ಆಗ ಶ್ರೀ ಶಂಕರರು ಲಕ್ಷ್ಮೀ ಮರಸಿಂಹ ಸ್ತೋತ್ರವನ್ನು ರಚಿಸಿ ನರಸಿಂಹನನ್ನು ಹಾಡಿ ಶಾಂತಗೊಳಿಸಿದರು. ಗೋಕರ್ಣದಲ್ಲಿ ಹರಿ-ಶಂಕರ ದೇವಾಲಯವನ್ನು ಸಂದರ್ಶಸಿ, ಕೊಲ್ಲೂರಿಗೆ ಬಂದು ಮೂಕಾಂಬಿಕೆಯನ್ನು ಸಂದರ್ಶಿಸಿದರು. ಕೊಲ್ಲೂರಿನಲ್ಲಿ ಒಬ್ಬ ಮೂಕ ನೆಂದು ತಿಳಿದಿದ್ದ ಬಾಲಕನನ್ನು ಶಿಷ್ಯನಾಗಿ ಸ್ವೀಕರಿಸಿದರು. ಅವನು ಜನ್ಮಜಾತ ಪಂಡಿತನೂ ಜ್ಞಾನಿಯೂ ಆಗಿದ್ದ. ಅವನಿಗೆ ಹಸ್ತಾಮುಲಕಾಚಾರ್ಯನೆಂದು ನಾಮಕರಣ ಮಾಡಿದರು. ಮುಂದೆ ಅವರು ತಮ್ಮ ಪರಿವಾರದೊಡನೆ [ಶಿಷ್ಯರು ಮತ್ತು ಉಭಯ ಭಾರತಿ] ಶೃಂಗೇರಿ ಸೇರಿದರು. ಅಲ್ಲಿ ತೋಟಕಾಚಾರ್ಯನೆಂದು ಪ್ರಸಿದ್ಧನಾದ ತೋಟಕಾಚಾರ್ಯನನ್ನು ಶಿಷ್ಯನಾಗಿ ಸ್ವೀಕರಿಸಿದರು. ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿ ಸುರೇಶ್ವರಾಚಾರ್ಯ ರನ್ನು ಅಲ್ಲಿ ನೆಲೆಗೊಳಿಸಿ. ಕೇರಳಕ್ಕೆ ಹೋದರು. [ಕೇರಳದಲ್ಲಿ ಅವರ ತಾಯಿ ಅನಾರೋಗ್ಯದಿಂದ ತೀರಿಕೊಳ್ಳಲು ಆ ಊರಿನ ನಂಬೂದರಿ ಬ್ರಾಹ್ಮಣರು ಅಸಹಕಾರ ತೋರಿದ್ದರಿಂದ ಶಂಕರರೊಬ್ಬರೇ ಅಂತ್ಯಕ್ರಿಯೆ ನಡೆಸಿದರು ಎಂದು ಐತಿಹ್ಯವಿದೆ]. ಅಲ್ಲಿಂದ ಪುನಃ ತಮಿಳನಾಡು, ಕರ್ನಾಟಕ, ಕಾಶ್ಮೀರ, ನೇಪಾಲಗಳಿಗೆ ದಿಗ್ವಿಜಯ ಹೋಗಿ ಅಲ್ಲಿದ್ದ ಪಂಡಿತರನ್ನೆಲ್ಲಾ ಜಯಿಸಿ ಅದ್ವೈತ ತತ್ವದ ಪ್ರಚಾರ ಮಾಡಿದರು.

ದಿಗ್ವಿಜಯದ ವಿವರ ;- ಶೃಂಗೇರಿಯಿಂದ ಕೇರಳಕ್ಕೆ ಬಂದು ಉತ್ತರಕ್ಕೆ ಹೊರಡುವಾಗ ಕೇರಳದ ರಾಜ ಸುಧನ್ವನು ಅವರಿಗೆ ಬೆಂಗಾವಲಾಗಿ ಬಂದನು. ಅವರು ತಮಿಳುನಾಡು ಕಂಚಿ ಯನ್ನು ದಾಟಿ ಆಂದ್ರಪ್ರದೇಶದ ಮೂಲಕ ವಿದರ್ಭಕ್ಕೆ ಬಂದರು; ಅಲ್ಲಿ ಪ್ರಯಾಣ ಮಾಡುವಾಗ ಸಶಸ್ತ್ರ ಕಾಪಾಲಿಕರು ಇವರನ್ನು ಎದುರಿಸಿದರು. ಸುಧನ್ವ ರಾಜನು ಅವರನ್ನು ನಿವಾರಿಸಿ, ಪುನಃ ಕರ್ನಾಟಕಕ್ಕೆ ಬಂದು, ಗೋಕರ್ಣಕ್ಕೆ ಸುರಕ್ಷಿತವಾಗಿ ತಲುಪಿಸಿದನು. ಅಲ್ಲಿ ಅವರು ಶೈವ ಪಂಥದವರೊಡನೆ ವಾದ ಮಾಡಿ ಜಯಿಸಿ ಶಿಷ್ಯರನ್ನಾಗಿ ಮಾಡಿಕೊಂಡರು.

ಅಲ್ಲಿಂದ ಸೌರಾಷ್ಟ್ರ [ಹಳೆಯ ಕಾಂಬೋಜ] ಕ್ಕೆ ಬಂದು ಪುಣ್ಯ ಕ್ಷೇತ್ರಗಳಾದ ಗಿರಿನಾರ, ಸೋಮನಾಥ, ಪ್ರಭಾಸ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಸೋಲಿಸಿ ಅದ್ವೈತ ತತ್ವವನ್ನು ಎತ್ತಿ ಹಿಡಿದರು. ಅಲ್ಲಿಂದ ದ್ವಾರಕೆಗೆ ಬಂದು ಅಲ್ಲಿ ಪ್ರಸಿದ್ಧರಾದ ಬೇಧಾಬೇಧ ಪಂಡಿತರಾದ ಭಟ್ಟ ಭಾಸ್ಕರರನ್ನು ವಾದದಲ್ಲಿ ಸೋಲಿಸಿದರು.. ದ್ವಾರಕೆಯ ಪಂಡಿತರೆಲ್ಲಾ ಅದ್ವೈತ ತತ್ವವನ್ನು ಒಪ್ಪಿಕೊಂಡರು. ಬಾಹ್ಲೀಕದಲ್ಲಿ ಜೈನಪಂಡಿತರನ್ನು ವಾದದಲ್ಲಿ ಹಿಮ್ಮಟ್ಟಿಸಿದರು. ಅಲ್ಲಿಂದ ಕಾಂಬೋಜಕ್ಕೆ [ಉತ್ತರಕಾಶ್ಮೀರ] ದಾರದ [ದಬೀಸ್ಥಾನ್] ಕ್ಕೆ ಬಂದು ಅಲ್ಲಿಯ ಸಂನ್ಯಾಸಿಗಳನ್ನೂ ಪಂಡಿತರನ್ನೂ ವಾದದಲ್ಲಿ ಸೋಲಿಸಿದರು ಎತ್ತರದ ಶಿಖರ ,ಕಣಿವೆಗಳನ್ನು ದಾಟಿ ಕಾಶ್ಮಿರ, ನಂತರ ಕಾಮರೂಪಕ್ಕೆ ಬಂದು ಅಲ್ಲಿ ನವಗುಪ್ತನೆಂಬ ತಾಂತ್ರಿಕನನ್ನು ಎದುರಿಸಿದರು.

ಕಾಶ್ಮೀರದಲ್ಲಿ ಸರ್ವಜ್ಞ ಪೀಠದ ಪ್ರವೇಶ ಮಾಡಿ ಅಲ್ಲಿಯ ಎಲ್ಲಾ ದರ್ಶನಗಳ ಪಂಡಿತರನ್ನೂ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನು [ ಶಾರದಾ ಪೀಠ] ವನ್ನು ಏರಿದರು. ಆ ಸರ್ವಜ್ಞ ಪೀಠಕ್ಕೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಿದ್ದು ದಕ್ಷಿಣ ಭಾರತದಿಂದ ಯಾರೂ ಶ್ರೇಷ್ಠ ಪಂಡಿತರು ಬಾರದೇ ಇದ್ದುದರಿಂದ ದಕ್ಷಿಣದ ಬಾಗಿಲು ತರೆದೇ ಇರಲಿಲ್ಲವಂತೆ. ಇವರು ಅದನ್ನು ತೆರೆಸಿ ಪ್ರವೇಶಮಾಡಿ, ಎಲ್ಲರನ್ನೂ ವಾದದಲ್ಲಿ ಜಯಿಸಿದರು.

ಅವರ ಜೀವನದ ಕೊನೆಯ ಭಾಗದಲ್ಲಿ ಹಿಮಾಲಯಕ್ಕೆ ಪ್ರಯಾಣ ಮಾಡಿ ಅಲ್ಲಿ ಕೇಧಾರ ದೇವಾಲಯದ ಹತ್ತಿರ ವಿದೇಹ ಮುಕ್ತಿಯನ್ನು ಪಡೆದರೆಂದು ಹೇಳುತ್ತಾರೆ. ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ; ಶಿಲಾಪ್ರತಿಮೆಯೂ ಇದೆ. ಕೇರಳದವರು ಕೇರಳದ ತ್ರಿಶೂರಿನಲ್ಲಿ ಅವರು ಸಮಾಧಿಸ್ಥ ರಾದರೆನ್ನುತ್ತಾರೆ, ತಮಿಳನಾಡಿನವರು ಆ ನಾಡಿನ ಕಂಚಿ ಯಲ್ಲಿ ಶಂಕರರು ವಿದೇಹ ಮುಕ್ತಿ ಪಡೆದರೆನ್ನುತ್ತಾರೆ. ಕೇರಳ, ಕಂಚಿಗಳಲ್ಲಿಯೂ ಅವರ ಸಮಾಧಿಗಳಿವೆ. ಆದರೆ ಎಲ್ಲಕ್ಕೂ ಪ್ರಾಚೀನ ವಾದ ಮಾಧವ ಶಂಕರ ವಿಜಯದಲ್ಲಿ ಕೇದಾರದಲ್ಲಿ ಅವರು ವಿದೇಹ ಮುಕ್ತಿಪಡೆದರೆಂದು ಹೇಳಿದೆ.

ಅವರು ವೈದಿಕ ಧರ್ಮದ ಮತ್ತು ಅದ್ವೈತದ ಪ್ರಚಾರಕ್ಕಾಗಿ ಭಾರತ ದೇಶದ ನಾಲ್ಕು ದಿಕ್ಕಿಗೆ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ಆವು ನಾಲ್ಕು ಬಗೆಯ ಪ್ರಚಾರ ಸಿದ್ಧಾಂತ ಹೊಂದಿದೆ. ೧.ದಕ್ಷಿಣದಲ್ಲಿ ಕರ್ನಾಟಕದಲ್ಲಿರುವ ಶೃಂಗೇರಿಯ ಶಾರದಾ ಪೀಠ ; ೨. ಪಶ್ಚಿಮದಲ್ಲಿ ಗುಜರಾತಿನಲ್ಲಿರುವ ದ್ವಾರಕೆಯ ದ್ವಾರಕಾ ಪೀಠ ; ೩. ಪೂರ್ವದಲ್ಲಿ ಒರಿಸ್ಸಾದಲ್ಲಿರುವ ಪುರಿಯಲ್ಲಿರುವ ಶ್ರೀಶಂಕರ ಪೀಠ [ಗೋವರ್ಧನ ಮಠ] ; ೪. ಉತ್ತರದಲ್ಲಿ ಈಗಿನ ಉತ್ತರಖಂಡ ರಾಜ್ಯದಲ್ಲಿರುವ ಜ್ಯೋತಿರ್ ಮಠ [ಜ್ಯೋಶಿಮಠ] . ಈ ನಾಲ್ಕು ಮಠ ಗಳಿಗೆ ಕ್ರಮವಾಗಿ, ಶ್ರೀಶಂಕರರ ಹತ್ತಿರದ ಶಿಷ್ಯರಾದ ೧. ಸುರೇಶ್ವರಾಚಾರ್ಯರು ; ೨. ಪದ್ಮಪಾಧಾಚಾರ್ಯರು.; ೩. ಹಸ್ತಾಮಲಕಾಚಾ ರ್ಯರು; ೪. ತೋಟಕಾಚಾರ್ಯರು , ಪ್ರಥಮ ಮಠಾಧೀಶರಾದರು. ಇವಕ್ಕೆ ಆಮ್ನಾಯ ಪೀಠವೆಂದು ಹೇಳುತ್ತಾರೆ [ ಉದಾ: ದಕ್ಷಿಣಾಮ್ನಾಯ ಪೀಠ -ಶೃಂಗೇರಿ ಶಂಕರ ಮಠ] . ಈ ಮಠಗಳ ನಂತರದ ಪೀಠಾಧಿಪತಿಗಳು ತಮ್ಮ ಹೆಸರಿನ ಮುಂದೆ ಶಂಕರಾಚಾರ್ಯ ಎಂದು ಸೇರಿಸಿಕೊಳ್ಳುತ್ತಾರೆ.

ಇವಲ್ಲದೆ ತಮಿಳುನಾಡಿನಲ್ಲಿರುವ ಕಂಚಿ ಕಾಮಕೋಟಿ ಪೀಠ. ಗೋಕರ್ಣದಲ್ಲಿ ಸ್ಥಾಪಸಿದ ಶ್ರೀ ಶಂಕರ ಮಠ [ಈಗ ಹೊಸನಗರದ ಹತ್ತಿರದ ರಾಮಚಂದ್ರಾಪುರದಲ್ಲಿರುವ ಶಂಕರ ಮಠ.] ಗಳನ್ನೂ ಸ್ಥಾಪಸಿದ್ದಾಗಿ ಹೇಳುತ್ತಾರೆ. ಆಮ್ನಾಯ ಮಠಗಳ ವಿವರ :-

ಶಿಷ್ಯರು ಮಠ ಮಹಾವಾಕ್ಯ ವೇದ-ಉಪನಿತ್ ಸಂಪ್ರದಾಯ(ಕೊನೆಯಲ್ಲಿ ಪಟ್ಟಿ ಇದೆ)

ಹಸ್ತಾಮಲಕಾಚಾರ್ಯ ಗೋವರ್ಧನ ಮಠ [ಪೂರ್ವ] ಪ್ರಜ್ಞಾನಂ ಬ್ರಹ್ಮ ಋಗ್ವೇದ ಐತರೇಯ ಭೋಗವಾಲ

ಸುರೇಶ್ವರಾಚಾರ್ಯ ಶಾರದಾಪೀಠ [ದಕ್ಷಿಣ] ಅಹಂ ಬ್ರಹ್ಮಾಸ್ಮಿ ಯಜುರ್ವೇದ ಬೃಹದಾರಣ್ಯಕ ಭೂರಿವಾಲ

ಪದ್ಮಪಾದಾಚಾರ್ಯ ದ್ವಾರಕಾಪೀಠ [ಪಶ್ಚಿಮ] ತತ್ವಮಸಿ ಸಾಮವೇದ ಛಾಂದೋಗ್ಯ ಕೀಟವಾಲ

ತೋಟಕಾಚಾರ್ಯ ಜ್ಯೋತಿರ್ ಮಠ [ಉತ್ತರದ ಮಠ] ಅಯಮಾತ್ಮಾ ಬ್ರಹ್ಮ ಅಥರ್ವ ವೇದ ಮಾಂಡೂಕ್ಯ ನಂದವಾಲ

ಶ್ರೀಶಂಕರರು ಷಣ್ಮತ ಸ್ಥಾಪಕರೆಂದೂ , ದಶನಾಮೀ ಮತ್ತು ಸ್ಮಾರ್ತ ಸಂಪ್ರದಾಯವನ್ನು ಪ್ರಾರಂಭಿಸಿದವರೆಂದೂ, ಪಂಚಾಯತನ ಪೂಜಾಪದ್ದತಿಯನ್ನು ಪ್ರಾರಂಭಿಸಿದವರೆಂದೂ ಹೇಳುತ್ತಾರೆ.

ಆರು ಬಗೆಯ ಆರಾಧಕರು ; ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು, ಮತ್ತು ಸ್ಕಂದ ಇವರ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳಾಡುತ್ತಿದ್ದದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮ ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು, ಉಳಿದ ದೇವತೆಗಳನ್ನು ಅದರ ಸುತ್ತ ಇಟ್ಟು ಅವನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸುವುದು . ಅದರಿಂದ ಅವರಿಗೆ ಷಣ್ಮತ ಸ್ಥಾಪಕರೆಂದು ಹೇಳುತ್ತಾರೆ.

ದಶನಾಮೀ ಪದ್ದತಿ :- ಸಂನ್ಯಾಸದಲ್ಲಿ ಏಕದಂಡೀ [ಒಂದು ದಂಡ-ದೊಣ್ಣೆ] ಸಂಪ್ರದಾಯ ವನ್ನು ಪ್ರಾರಂಭಿಸಿದರು. ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮ ಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು : ೧.ಸರಸ್ವತಿ ; ೨.ತೀರ್ಥ; ೩.ಅರಣ್ಯ, ; ೪. ಭಾರತಿ ; ೫.ಆಶ್ರಮ ; ೬. ಗಿರಿ [ಕ್ರಿಯಾಯೋಗ ಅಭ್ಯಾಸ ಮಾಡುವವರು - ಜಾತಿಮತ ಬೇಧವಿಲ್ಲ.] ; ೭.ಪರ್ವತ ; ೮. ಸಾಗರ ; ೯.ವನ ; ೧೦. ಪುರಿ .

ಸರಸ್ವತಿ, ಪುರಿ, ಭಾರತಿ, ಉಪನಾಮಗಳು ಶೃಂಗೇರಿ ಪೀಠಕ್ಕೆ ಸೇರಿವೆ ; ತೀರ್ಥ , ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ ; ಗಿರಿ, ಪರ್ವತ, ಸಾಗರ ಇವು ಜ್ಯೋತಿರ್ ಮಠಕ್ಕೆ ಸೇರಿವೆ ; ವನ , ಅರಣ್ಯ, ನಾಮಗಳು ಪುರಿಯ ಗೋವರ್ಧನ ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಆದರೂ ಇದು ಅಷ್ಟೇನೂ ಬಿಗಿಯಾದ ನಿಯಮವಿದ್ದಂತೆ ಕಾಣುವುದಿಲ್ಲ. ಕಾರಣ ಅರಣ್ಯ ನಾಮದ ವಿದ್ಯಾರಣ್ಯರು ಶೃಂಗೇರಿಯ ಮಠದ ಗುರುಗಳಾಗಿದ್ದರು.

ಪಂಚಾಯತನ ಪೂಜೆ :- ಆರಾಧಕರಲ್ಲಿ ಪರಸ್ಪರ ಕಾದಾಟ ಹೋಗಲಾಡಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸ್ಮಾರ್ತ ಸಂಪ್ರದಾಯವನ್ನು ಹುಟ್ಟುಹಾಕಿದರು.

ವೇದ ಪದ್ದತಿಯಲ್ಲಿ [ಶ್ರುತಿ -ವೇದ ಮತು ಸ್ಮೃತಿಗಳು-ಮನು ಸ್ಮೃತಿ ಮೊದಲಾದವು ಮತ್ತು ಪೌರಾಣಿಕ ಪದ್ದತಿಗಳ ಸಮನ್ವಯ] ಪೂಜಾದಿ ವಿಧಿಗಳನ್ನೂ , ಹೋಮ ಹವನಗಳನ್ನೂ, ಸಂಸ್ಕಾರಗಳನ್ನೂ ಮಾಡುವ ಒಂದು ಕ್ರಮ, ಸ್ಮಾರ್ತ ಸಂಪ್ರದಾಯ. ಸ್ಮಾರ್ತರು ಪಂಚಾಯತನ ಪೂಜೆಯಲ್ಲಿ ಸೂರ್ಯ, ಗಣಪತಿ, ಅಂಬಿಕಾ, ಶಿವ ಮತ್ತು ವಿಷ್ಣು ಈ ಐದು ದೇವತೆಗಳನ್ನು ಒಟ್ಟಿಗೆ, ಪ್ರಮುಖ ದೇವತೆಯನ್ನು ಮಧ್ಯದಲ್ಲಿಟ್ಟು ಪೂಜಿಸುತ್ತಾರೆ. ಯಾವುದಾದರೂ ಒಂದು ದೇವತೆಯ ಬದಲಿಗೆ ಸ್ಕಂದನನ್ನು ಸ್ಕಂದೇವತೆಯ ಉಪಾಸಕರು ಸೇರಿಸಿಕೊಳ್ಳ ಬಹುದು.

ಸಾವಿರದ ಇನ್ನೂರು ವರ್ಷಗಳ ಹಿಂದೆ, ಕೇವಲ ಮೂವತ್ತೆರಡು ವರ್ಷ ಬದುಕಿದ್ದರೂ ಇಡೀ ಭಾರತಕ್ಕೆ ಅನ್ವಯವಗುವ ಸಂಪ್ರದಾಯವನ್ನು ಹುಟ್ಟು ಹಾಕಿ ಜನರು ಅದನ್ನು ಅನುಸರಿಸುವಂತೆ ಪ್ರಭಾವ ಮಾಡಿದ್ದು, ಅವರ ಅತಿದೊಡ್ಡ ಸಾಧನೆ. ಅಲ್ಲದೆ, ಅವರ ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗು ಗೊಳಿಸಿದೆ.

ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ |

ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್ ||

ಶ್ರುತಿ ಸ್ಮ ತಿ ಪುರಾಣಗಳ ಆಶ್ರಯರಾಗಿರುವ, ಲೋಕಕ್ಕೆ ಕಲ್ಯಾಣ ಉಂಟುಮಾಡುವ ಕರುಣೆಯಿಂದ ತುಂಬಿದ ಶ್ರೀ ಶಂಕರ ಭಗವತ್ಪಾದರನ್ನು ಭಕ್ತಿ ಪೂರ್ವಕ ನಮಿಸುತ್ತೇನೆ .

ಓಂ ತತ್ ಸತ್

[ಸಂಗ್ರಹ : ಬಿ.ಎಸ್. ಚಂದ್ರಶೇಖರ, ಸಾಗರ ; ದಿನಾಂಕ: ೦೬-೦೯-೨೦೧೦ ಭಾನುವಾರ]


No comments:

Post a Comment