Thursday, December 15, 2011

THE 20TH CENTURY SAINT, GANDHIJI -

೨೦ನೇ ಶತಮಾನದ ಸಂತ ಗಾಂಧೀಜೀ.
& $

(ಲೇ. ಬಿ.ಎಸ್. ಚಂದ್ರಶೇಖರ, ಸಾಗರ; ೪-೧೦ಅಕ್ಟೋಬರ್ ೧೯೯೯ರ ಸ್ಥಳೀಯ ಸಾಗರ ವಾರ ಪತ್ರಿಕೆ ಯಲ್ಲಿ ಪ್ರಕಟಿತ. ಚಿತ್ರಗಳನ್ನು ಕಂ.ಗೆ ಹಾಕುವಾಗ ಸೇರಿಸಿದೆ. ಕಂ||ಗೆ ಹಾಕಿದ ದಿನ ೮/೯-೪-೨೦೧೦)
ಗಾಂಧೀಜಿ ಯಾರು? ಎಂಬ ಪ್ರಶ್ನೆಗೆ ಹಲವು ಉತ್ತರಗಳನ್ನು ಕೊಡಬಹುದು. ಗುಜರಾತಿನ ಕರಮಚಂದ್ ಮತ್ತು ಪುತಲೀಬಾಯಿಯವರ ಮಗ, ಅಹಿಂಸಾಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯತಂದು ಕೊಟ್ಟವರು, ಮಹಾತ್ಮಾ ಗಾಂಧಿ ಅಥವಾ ಮೋಹನ ದಾಸ ಕರಮಚಂದ ಗಾಂಧಿ, , ರಾಷ್ಟ್ರ ಪಿತ ಗಾಂಧಿ, ಆದರೆ ಇದಾವುದೂ ಗಾಂಧೀಜೀ ಯಾರು ಎಂಬ ಪ್ರಶ್ನೆಗೆ ಪೂರ್ಣವಾದ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ, ಸಾಧನೆ, ಪ್ರಯೋಗಗಳನ್ನಾಗಲೀ, ಅವರ ಅಂತಃಸತ್ವವನ್ನೂ, ಅವರ ನಿಜವಾದ ಅಧ್ಯಾತ್ಮಿಕ ವ್ಯಕ್ತಿತ್ವವನ್ನು ವಿವರಿಸಲಾರದು.
ಭಾರತದಲ್ಲಿ ವಿದ್ಯಾಭ್ಯಾಸಮುಗಿಸಿಇಂಗ್ಲೆಂಡಿಗೆ ಕಾನೂನು ಪದವಿ ಪಡೆಯಲು ಹೋದ ಮೋಹನ ದಾಸ ಗಾಂಧಿ ಪಾಶ್ಚಿಮಾತ್ಯಪದ್ದತಿಗೆ ಮನಸೋತರು. ಆದರೆ ಅವರ ಪೂರ್ವ ಸಂಸ್ಕಾರದಿಂದ ಸ್ವಲ್ಪದರಲ್ಲಿಯೇ ಎಚ್ಚತ್ತರು. ಅವರು ಬೈಬಲ್ ಬೋಧನೆಗಳಲ್ಲಿ ಬಡವರ ಬಗ್ಗೆ , ದಲಿತರ ಬಗ್ಗೆ ಅವನ ಕಳಕಳಿಯನ್ನು ಓದಿ ಅದರ ಪ್ರಭಾವಕ್ಕೊಳಗಾದರು. ಆಕಸ್ಮಿಕವಾಗಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡ ಭಗವದ್ಗೀತೆಯನ್ನ ಓದಿದರು. ಅಂದಿನಿಂದಲೇ ಅದು ಅವರನ್ನು ಸೆಳೆಯಿತು. ಗೀತೆ ಅವರ ಕೊನೆಯ ಉಸಿರು ಇರುವರೆಗೂ ಅವರ ಜೀವನದ ಮಾರ್ಗದರ್ಶನದ ಗ್ರಂಥವಾಯಿತು, ಆವರ ತಂದೆ ತಾಯಿಯಿಂದ ಬಂದ ಭಕ್ತಿ, ರಾಮ ನಾಮ ಅವರ ಜೀವನದ ಉಸಿರಾಯಿತು.
ಗಾಂಧೀಜೀಯವರೇ ಹೇಳಿದಂತೆ ಅವರ ಜೀವನ ಕ್ರಮವನ್ನೇ ಬದಲು ಮಾಡಿದ ಗ್ರಂಥ, ರಸ್ಕಿನ್ನನ ಅನ್ ಟು ದಿ ಲಾಸ್ಟ್. ಜೋಹಾನ್ಸ ಬರ್ಗ್ ನಿಂದ ಡರ್ಬಿನ್ನಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಓದಿದ ಪುಸ್ತಕ. ಅವರ ಮಾತಿನಲ್ಲೇ ಹೇಳುವುದಾದರೆ, ನಾನು ಆದಿನ ರಾತ್ರಿ ನಿದ್ದೆ ಮಾಡಲಾಗಲಿಲ್ಲ. ನಾನು, ನನ್ನ ಜೀವನವನ್ನು ಆಪುಸ್ತಕದಲ್ಲಿ ಹೇಳಿದ ಆದರ್ಶಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ. ಆಗ್ರಂಥದಲ್ಲಿ ಹೇಳಿದ ಆದರ್ಶಗಳು ಮೂರು:
೧. ಒಬ್ಬ ವ್ಯಕ್ತಿಯ ಹಿತ, ಎಲ್ಲಾ ಜನರ ಹಿತದಲ್ಲಿದೆ.
೨. ಒಬ್ಬ ಲಾಯರನ ಉದ್ಯೋಗವಾಗಲಿ, ಒಬ್ಬ ಕ್ಷೌರಿಕನ ಉದೋಗವಾಗಲೀ ಸಮಾನ ಗೌರವ ಉಳ್ಳದ್ದು.
೩. ರೈತನ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಠವಾದವು.
ಹಣ ಸಂಪಾದನೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಅವರ ಜೀವನ ಕ್ರಮ ಬದಲಾಗಿ, ಅವರೊಬ್ಬ ಸಮಾಜ ಸೇವಕರಾಗಿ, ಸತ್ಯಾಗ್ರಹಿಯಾಗಿ, ಪ್ರಾಮಾಣಿಕ ಲಾಯರಾಗಿ ಕೆಲಸಮಾಡಿದ್ದನ್ನು ಕೇಳಿದ್ದೇವೆ. ಟಾಲಸ್ಟಾಯ್ ಫಾರಂ ಅಥವಾ ಫೀನಿಕ್ಷ್ ಆಶ್ರಮ ಸ್ಥಾಪಿಸಿ, ಅಲ್ಲಿ ಗೃಹ ಕೈಗಾರಿಕೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ಪ್ರಯೋಗ ಮಾಡಿ , ಮೂಲ ಶಿಕ್ಷಣ ಸಿದ್ಧಾಂತವನ್ನು (ಬೇಸಿಕ್ ಎಜುಕೇಶನ್) ರೂಪಿಸಿದರು. ತಮ್ಮ ಆದಾಯವನ್ನೆಲ್ಲಾ ಸಮಾಜ ಸೇವೆಗೆ ತ್ಯಾಗ ಮಾಡಿದರು. ಅಂದಿನ ಕಾಲದಲ್ಲಿ ಅವರ ವಾರ್ಷಕ ಆದಾಯ ಸುಮಾರು ಅರವತ್ತು ಸಾವಿರ ರೂಪಾಯಿಗೂ ಹೆಚ್ಚು (೧೮೯೩-೧೯೧೫)
ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಶಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅವರೂ ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಆದರೆ ಅವರು ತಮ್ಮ ಆತ್ಮ ಚರಿತ್ರೆಗೆ ಸತ್ಯಾನ್ವೇಷಣೆಯ ಪ್ರಯೋಗಗಳು, ಎಂದು ಹೆಸರಿಸಿದ್ದಾರೆ. ಅವರು ನಂಬಿದ ದೇವರು ಸತ್ಯ. ಸತ್ಯ ವೆಂದರೆ ಉಪನಿಷತ್ತು , ಗೀತೆಯಲ್ಲಿ ಹೇಳಿದ ಸತ್ ಅರ್ಥಾತ್ ಈವಿಶ್ವವನ್ನು ಆವರಿಸಿರುವ - ನಡೆಸುವ ಚೇತನ. ಅದರ ಸಾಕಾರ ಮೂರ್ತಿ ಅಥವಾ ಶಬ್ದರೂಪವೇ ಅವರು ನಂಬಿದ ಶ್ರೀ ರಾಮ ತಾರಕ ಮಂತ್ರ. ಅವರು ಗೀತೆ ಮೊದಲಾದ ಅನೇಕ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ , ಜಪ, ಧ್ಯಾನ, ಪ್ರಾರ್ಥನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಅವರು ತಮ್ಮ ಪತ್ನಿಯನ್ನು ಒಪ್ಪಿಸಿಕೊಂಡು, ಬ್ರಹ್ಮಚರ್ಯವನ್ನು ಪಾಲಿಸುತ್ತಾ, ರಾತ್ರಿಯಲ್ಲಿ ಧ್ಯಾನ ಜಪಗಳ ಸಾಧನೆ ನಡೆಸಿದರು. ಅವರ ಆತ್ಮ ಕಥೆಯಲ್ಲಿ ಆ ವಿಚಾರ ಸ್ವಲ್ಪ ಬಂದಿದೆ. ಅವರ ಶೋಧನೆ ಸಾಧನೆಗಳು, ವಿಶ್ವ ಚೇತನವಾದ ಪರಬ್ರಹ್ಮ ವಸ್ತುವೆಂದು ಕರೆಯಲ್ಪಡುವ ಆ ಸತ್ಯವೇ ಆಗಿತ್ತು. ಅವರು ಧರ್ಮ,ಧ್ಯಾನ, ಸಾಧನೆಗಳಲ್ಲಿ ಅನುಮಾನ, ತೊಡಕು ಉಂಟಾದಾಗ ತಮ್ಮ ಧಾರ್ಮಿಕ ಗುರುವೆಂದು ನಂಬಿದ ಅವರ ಮಿತ್ರರೂ, ಜ್ಞಾನಿಯೂ ಆದ ಬೊಂಬಾಯಿನ ರಾಯಚಂದ ಭಾಯಿಯವರಿಂದ ಪತ್ರ ಮುಖೇನ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು.
ಅವರ ಬಹಿರಂಗ ಜೀವನದ ನಡವಳಿಕೆಯಲ್ಲಿ ಅಹಿಂಸೆ ಮತ್ತು ಸತ್ಯದ ಮಾರ್ಗ ಅವರು ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವುದಕ್ಕೆ ಸಾಧನವಾಗಿತ್ತು. ಅದು ರಾಜಕೀಯವಿರಲಿ, ಸಮಾಜ ಸೇವೆ ಇರಲಿ, ಶಿಕ್ಷಣದ ಪ್ರಯೋಗವಿರಲಿ, ತಮ್ಮ ಅಂತರಂಗದ ಸಾಧನೆಗೆ ವಿರೋಧವುಂಟಾಗದಂತೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿದ್ದರು.
ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಅಧ್ಯಾತ್ಮ ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು ಕೋಟಿ ಜನರ, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ, ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ; ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು; ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ. ವಿವೇಕಾನಂದರ ನಂತರ ಬಂದ ಮಹಾಯೋಗಿ ಪರಮಹಂಸ ಯೋಗಾನಂದರು, ಗಾಂಧೀಜೀಯ ಆತ್ಮ ಪ್ರಭೆಯು (ಅವುರಾ) ಅವರ ದೇಹದಿಂದ ಬಹು ದೂರದ ವರೆಗೆ ಅಲೆ ಅಲೆಯಾಗಿ ಪಸರಿಸುತ್ತಿರವುದನ್ನು ಕಂಡುದಾಗಿ ಹೇಳಿದ್ದಾರೆ. ಅವರು, ಗಾಂಧೀಜೀ ತಮ್ಮ ದೇಹ ಭಾವ ಮತ್ತು ಪಂಚೇಂದ್ರಿಯಗಳಿಂದ ತಮ್ಮ ಚಿತ್ತವನ್ನು ಸುಲಭವಾಗಿ ಕಳಚಿಕೊಳ್ಳಬಲ್ಲವರಾಗಿದ್ದುದನ್ನು ತಿಳಿಸಿದ್ದಾರೆ. ಅವರು(ಗಾಂಧೀಜಿ) ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ (ಅನಿಸ್ತೀಶಿಯ) ತೆಗೆದುಕೊಳ್ಳದೆ, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದುದನ್ನು ಉದಾಹರಿಸಿದ್ದಾರೆ.
ಗಾಂಧೀಜೀ ತಮ್ಮ ತೀರ್ಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಅಸಾಧ್ಯವಾದಾಗ, ತಮ್ಮ ಅಂತರಂಗದ ವಾಣಿ ಯ ಅನುಸಾರವಾಗಿ ನಡೆಯುತ್ತಿದುದಾಗಿ ಹೇಳತ್ತಿದ್ದರು. ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಅವರನ್ನು ಹತ್ಯೆ ಗೈದವರು ಗಾಂಧೀಜೀಯ ವ್ಯಕ್ತಿತ್ವಕ್ಕೆ ಹೋಲಿಸಿದಾಗ ಅತ್ಯಂತ ಕುಬ್ಜರು, ಅಲ್ಪರು. ಹತ್ಯೆ ಗೈದವರ ವ್ಯಕ್ತಿತ್ವ ಶೂನ್ಯವಾಗುತ್ತದೆ. ಒಬ್ಬ ಸಂತನ ಹತ್ಯೆಯನ್ನು ಸಮರ್ಥಿಸಿಕೊಳ್ಳವುದು ಅಲ್ಪತನವಾಗುವುದು.
ಅವರ ಹತ್ಯೆಯಾದಾಗ ವ್ಯಾಟಿಕನ್ ಪೋಪರು ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೋಡಷ್ಟೇ ದುಃಖವಾಗಿದೆ ಎಂದರು. ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು, ಎಂದರು.
ಅಹಿಂಸೆ, ಶಾಂತಿ ಮತ್ತು ದೈವಿಕ ಪ್ರೇಮದ ಸಿದ್ಧಿ ಅವರ ಗುರಿ. ದ್ವೇಷವೇ ಇಲ್ಲದ ಜಗತ್ತು ಅವರ ಕನಸು. ಸರ್ವತ್ರ ಪ್ರೇಮ ಅವರ ಬದುಕು. ತಮ್ಮಂತೆ ಇತರರೂ ಸರ್ವತ್ರ ಪ್ರೇಮವನ್ನು ತೋರಬೇಕೆಂಬ ಅವರ ಬಯಕೆ ಮತ್ತು ಒತ್ತಾಸೆ ಅವರ ಜೀವಕ್ಕೆ ಮುಳುವಾಯಿತು. ಆದರೆ, ಅವರ ಆದರ್ಶ, ರಾಮರಾಜ್ಯದ ಕನಸು, ಸ್ವಯಂ ಪೂರ್ಣ ಗ್ರಾಮ ರಾಜ್ಯದ ಆರ್ಥಿಕ ಸಿದ್ದಾಂತ, ಪ್ರಸ್ತುತ ಮತ್ತು ಸದಾ ಜೀವಂತ. ಸಂತರ ದೇಹಕ್ಕೆ ಅಳಿವಿದ್ದರೂ, ಅವರ ಆದರ್ಶ, ಸಂಕಲ್ಪಗಳಿಗೆ ಸಾವಿಲ್ಲ.
ಓಂ ಶಾಂತಿಃ ಶಾಂತಿಃ ಶಾಂತಿಃ

No comments:

Post a Comment